Latest

ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಮತ್ತೇಕೆ ಸುದ್ದಿಯಲ್ಲಿದ್ದಾರೆ? ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಿಂಗಂ ಖ್ಯಾತಿಯ ಖಡಕ್ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಈಗ ವಿಭಿನ್ನ ಕಾರಣಗಳಿಗೆ ಸುದ್ದಿಯಾಗುತ್ತಿದ್ದಾರೆ. ಒಂದೆಡೆ ಭ್ರಷ್ಟಾಚಾರದ ಆರೋಪ, ಇನ್ನೊಂದೆಡೆ ಅವರು ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ರಾಜ್ಯದ ಜನರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಸುಮಾರು 6 ತಿಂಗಳ ಹಿಂದೆ ಚನ್ನಣ್ಣನವರ್ ಬಿಜೆಪಿ ಸೇರುತ್ತಾರೆ ಎನ್ನುವ ದಟ್ಟ ವದಂತಿ ಹರಡಿತ್ತು. ಆಗ ಅವರು ಸ್ಪಷ್ಟನೆ ನೀಡಿ, ನಾನು ಭರವಸೆ ಎನ್ನುವ ಪುಸ್ತಕ ಬರೆಯುತ್ತಿದ್ದೇನೆ. ಹಾಗಾಗಿ ಮಠಾಧೀಶರು, ರಾಜಕಾರಣಿಗಳು ಹಾಗೂ ಸ್ನೇಹಿತರನ್ನು ಭೇಟಿಯಾಗುತ್ತಿದ್ದೇನೆ. ಹಾಗಾಗಿ ರಾಜಕೀಯಕ್ಕೆ ಸೇರುತ್ತೇನೆ ಎನ್ನುವ ಸುದ್ದಿಯನ್ನು ಕೆಲವರು ಹರಡುತ್ತಿದ್ದಾರೆ. ಆದರೆ ಇದೆಲ್ಲ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದರು.

ಈಗ ಮತ್ತೆ ಅವರ ವರ್ಗಾವಣೆೆ ಮತ್ತು ಅದನ್ನು ತಡೆಹಿಡಿದಿದ್ದರಿಂದಾಗಿ ಅಂತದೇ ಸುದ್ದಿ ಹರಡಿದೆ. ಅವರು ಇನ್ನಷ್ಟೆ ಸ್ಪಷ್ಟನೆ ನೀಡಬೇಕಿದೆ.

ರವಿ ಡಿ. ಚೆನ್ನಣ್ಣನವರ್ ಕೃಷಿ ಕುಟುಂಬದಿಂದ ಬಂದವರು. ಗದಗ ಜಿಲ್ಲೆಯ ನೀಲಗುಂದ ಗ್ರಾಮದಲ್ಲಿ ೧೯೮೫ ಜುಲೈ ೨೩ರಂದು ಜನಿಸಿದ ಅವರು ಹಳ್ಳಿಯಲ್ಲಿ ಆರಂಭಿಕ ಶಿಕ್ಷಣ ಪಡೆದು, ರಾಜ್ಯಾದ್ಯಂತ ಮನೆಮಾತಾಗಿರುವ ಪೊಲೀಸ್ ಅಧಿಕಾರಿ. ಮುಳಗುಂದದಲ್ಲಿ ಪಿಯುಸಿ ಓದಿದ ರವಿ ಚೆನ್ನಣ್ಣನವರ್ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದವರು.

ಬಡತನದಲ್ಲಿ ಓದಿದ ರವಿ ಡಿ. ಚೆನ್ನಣ್ಣನವರ್ ತಮ್ಮ ಶೈಕ್ಷಣಿಕ ವೆಚ್ಚ ಭರಿಸಲು ಅರೆಕಾಲಿಕ ಕೆಲಸವನ್ನೂ ಮಾಡುತ್ತಿದ್ದರಂತೆ. ೨೦೦೮ರಲ್ಲಿ ಐಪಿಎಸ್ ಪಾಸ್ ಮಾಡಿದ ಅವರು ಬಳಿಕ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದರು.

ಕೃಷಿ ಕುಟುಂಬ, ಗ್ರಾಮೀಣ ಹಿನ್ನೆಲೆಯ ಕಾರಣದಿಂದ ರವಿ ಡಿ. ಚೆನ್ನಣ್ಣನವರ್ ಜನರೊಂದಿಗೆ ಹೆಚ್ಚು ಮುಕ್ತವಾಗಿ ಬೆರೆಯುತ್ತಾರೆ. ಪುಂಡರಿಗೆ ಖಾಕಿಯ ಖದರ್ ತೋರಿಸುವ ಈ ಅಧಿಕಾರಿ ಜನಸಾಮಾನ್ಯರೊಂದಿಗೆ ಅಷ್ಟೇ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲ, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಶಿಸ್ತು, ವ್ಯಕ್ತಿತ್ವ ವಿಕಸನದಂತಹ ಪಾಠ ಹೇಳುತ್ತಾರೆ. ಹಾಗಾಗಿ ರವಿ ಡಿ. ಚೆನ್ನಣ್ಣನವರ್ ಅಪಾರ ಜನಪ್ರಿಯತೆ ಪಡೆದು ರಾಜ್ಯಾದ್ಯಂತ ಮನೆಮಾತಾಗಿದ್ದಾರೆ.

ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ರವಿ ಡಿ. ಚೆನ್ನಣ್ಣನವರ್ ಬೇರೆಯದೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಸರಕಾರ ಅವರನ್ನು ನಾನ್ ಎಕ್ಸಿಕ್ಯುಟಿವ್ ಹುದ್ದೆಗೆ ವರ್ಗಾಯಿಸಿದ್ದು ವಾಲ್ಮೀಕಿ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವ ಸಿದ್ಧತೆ ನಡೆಸಿತ್ತು. ಸಧ್ಯ ಇದಕ್ಕೆ ಬ್ರೇಕ್ ಬಿದ್ದಿದೆ. ಸರಕಾರವೇ ಆದೇಶವನ್ನು ತಡೆಹಿಡಿದಿದೆ. ಈ ಕುರಿತು ಜನರಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಭ್ರಷ್ಟಾಚಾರ ಆರೋಪಕ್ಕಾ ಅಥವಾ ಖಾದಿ ತೊಡುವ ಸಿದ್ಧತೆಯಾ ?

ರವಿ ಡಿ. ಚೆನ್ನಣ್ಣನವರ್ ಅವರನ್ನು ವಾಲ್ಮೀಕಿ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿಸಿದ್ದರ ಹಿಂದೆ ಅವರ ಮೇಲಿನ ಭ್ರಷ್ಟಾರದ ಆರೋಪ ಕಾರಣವಾಗಿದೆಯಾ ಅಥವಾ ಮುಂದಿನ ದಿನಗಳಲ್ಲಿ ಖಾಕಿ ಬಿಟ್ಟು ಖಾದಿ ತೊಡುವ ಸಿದ್ಧತೆಯಾ ಎಂಬುದು ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.

ಖಡಕ್ ಅಧಿಕಾರಿ ರವಿ ಚೆನ್ನಣ್ಣನವರ್ ಕೂಡ ಭ್ರಷ್ಟಾಚಾರದ ಆರೋಪದಿಂದ ಮುಕ್ತರಾಗಿಲ್ಲ. ಬೆಂಗಳೂರಿನ ವಕೀಲ ಜಗದೀಶ್ ಎಂಬುವವರು ರವಿ ಚೆನ್ನಣ್ಣನವರ್ ವಿರುದ್ಧ ಭೂ ಕಬಳಿಕೆಯ ಗಂಭೀರ ಆರೋಪ ಮಾಡಿದ್ದಾರೆ. ದೊಡ್ಡ ಬಳ್ಳಾಪುರದ ಬಳಿಯ ಜಮೀನೊಂದನ್ನು ಕಬಳಿಸಿದ್ದಾರೆ ಎಂಬ ಆರೋಪವಿದೆ. ಅಲ್ಲದೆ ೫೦ ಲಕ್ಷ ರೂ. ವಸೂಲಿ ಮಡಿದ್ದಾರೆ ಎಂದೂ ಜಗದೀಶ್ ಆರೋಪಿಸಿದ್ದಾರೆ. ತಮ್ಮ ಬಳಿ ದಾಖಲೆಗಳಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿಯು ಟ್ಯೂಬ್‌ನಲ್ಲಿ ಸುದೀರ್ಘ ಹೇಳಿಕೆಗಳನ್ನು ನೀಡಿದ್ದಾರೆ.

ಅಲ್ಲದೆ ಕೆಲವು ದಾಖಲೆಗಳನ್ನು ಸಹ ಅವರು ಯುಟ್ಯೂಬ್‌ನಲ್ಲಿ ತೋರಿಸಿದ್ದಾರೆ. ವಿಷಯದ ಸತ್ಯಾಸತ್ಯತೆ ಏನೆ ಇದ್ದರೂ ಆರೋಪ ಗುರುತರವಾಗಿರುವ ಹಿನ್ನೆಲೆಯಲ್ಲಿ ಸಿಂಗಂ ಖ್ಯಾತಿಯ ರವಿ ಡಿ. ಚೆನ್ನಣ್ಣವರ್‌ಗೆ ಸರಕಾರ ನಾನ್ ಎಕ್ಸಿಕ್ಯುಟಿವ್ ಹುದ್ದೆಯ ದಾರಿ ತೋರಿಸಿದೆಯಾ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.

ಇನ್ನೊಂದೆಡೆ ಜಗದೀಶ ಅವರ ಆರೋಪವನ್ನು ಸಾರಾಸಗಟಾಗಿ ಅಲ್ಲಗಳೆಯುತ್ತಿರುವ ರವಿ ಡಿ. ಚೆನ್ನಣ್ಣನವರ್ ಅಭಿಮಾನಿಗಳು, ರವಿ ಅವರು ಮುಂದಿನ ದಿನಗಳಲ್ಲಿ ರಾಜಕಾರಣಕ್ಕೆ ಧುಮುಕಲಿದ್ದಾರೆ ಎಂದೂ ಪ್ರತಿಪಾದಿಸುತ್ತಿದ್ದಾರೆ. ಈಗಾಗಲೇ ಅಪಾರ ಜನಪ್ರಿಯತೆ ಪಡೆದಿರುವ ರವಿ ಡಿ. ಚೆನ್ನಣ್ಣನವರ್ ವಾಲ್ಮೀಕಿ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಬಂದರೆ ಮತ್ತಷ್ಟು ಜನಸಂಪರ್ಕ ಹೆಚ್ಚಿಸಿಕೊಳ್ಳುತ್ತಾರೆ. ಅಲ್ಲದೇ ನೇರವಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳ್ಳುವುದಕ್ಕೂ ಅವರಿಗೆ ಅವಕಾಶವಾಗುತ್ತದೆ. ಇದರಿಂದ ಅವರಿಗೆ ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡಲು ವೇದಿಕೆ ಸಿದ್ಧವಾಗುತ್ತದೆ. ರವಿ ಡಿ. ಚೆನ್ನಣ್ಣನವರ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

ರಾಜಕೀಯ ಧುಮುಕುತ್ತಿದ್ದಾರೆ ಅಧಿಕಾರಿಗಳು

ಈ ಹಿಂದೆ ರಾಜಕೀಯ ಕ್ಷೇತ್ರಕ್ಕೆ ನಿವೃತ್ತ ಅಧಿಕಾರಿಗಳು ಬರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅಧಿಕಾರದಲ್ಲಿದ್ದಾಗಲೇ ರಾಜಕೀಯದೆಡೆಗೆ ಆಕರ್ಷಿತರಾಗುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲೂ ಸಹ ರಾಜೇಶ್ ಫೈಲಟ್, ಜಸ್ವಂತ್ ಸಿಂಗ್, ಜನರಲ್ ವಿ. ಕೆ. ಸಿಂಗ್, ಓಲಂಪಿಕ್ ಬೆಳ್ಳಿ ಪದಕ ವಿಜೇತರೂ ಆಗಿದದ್ದ ಮಿಲಿಟರಿ ಅಧಿಕಾರಿ ರಾಜ್ಯವರ್ಧನ್‌ಸಿಂಗ್ ರಾಠೋಡ್ ಮೊದಲಾದವರು ರಾಜಕೀಯಕ್ಕೆ ಧುಮುಕಿದ್ದರೆ, ಕರ್ನಾಟಕದಲ್ಲೂ ಸಹ ಖಡಕ್ ಪೊಲೀಸ್ ಅಧಿಕಾರಿಯಾಗಿ ಖ್ಯಾತರಾಗಿದ್ದ ಅಬ್ದುಲ್ ಅಜೀಂ ಮೊದಲಾದವರು ರಾಜಕೀಯ ಕ್ಷೇತ್ರಕ್ಕೆ ಬಂದಿದ್ದಾರೆ. ಇನ್ನು ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ಭಾಸ್ಕರ ರಾವ್ ಕೂಡ ಸ್ವಯಂ ನಿವೃತ್ತಿ ಪಡೆದಿದ್ದು ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.

ಆದರೆ ಇತ್ತೀಚೆಗೆ ಯುವ ಅಧಿಕಾರಿಗಳು ಅಧಿಕಾರದ ಉತ್ತುಂಗದಲ್ಲಿದ್ದಾಗಲೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಧುಮುಕುತ್ತಿರುವುದು ಚಕಿತಗೊಳಿಸುತ್ತಿದೆ. ಖಡಕ್ ಐಪಿಎಸ್ ಅಧಿಕಾರಿಯಾಗಿ ಅಪಾರ ಜನಮನ್ನಣೆ ಗಳಿಸಿದ್ದ ಅಣ್ಣಾಮಲೈ ಏಕಾಏಕಿ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದು ಜನರಿಗೆ ಶಾಕಿಂಗ್ ಆಗಿತ್ತು. ಆದರೆ ತಮ್ಮ ನಿರ್ಧಾರದ ಬಗ್ಗೆ ಸ್ಪಷ್ಟ ನಿಲುವು ತಳೆದಿರುವ ಅಣ್ಣಾಮಲೈ, ಪೊಲೀಸ್ ಅಧಿಕಾರಿಯಾಗಿದ್ದುಕೊಂಡು ಸಾರ್ವಜನಿಕ ಸೇವೆ ಮಾಡುವಲ್ಲಿ ಇರುವ ಮಿತಿಗಳ ಬಗ್ಗೆ ವಿವರಿಸಿದ್ದರು. ಪ್ರಸ್ತುತ ಅವರು ತಮಿಳುನಾಡಿನ ಬಿಜೆಪಿ ಅಧ್ಯಕ್ಷರಾಗಿದ್ದು ರಾಜಕೀಯದಲ್ಲಿ ಪೂರ್ತಿಯಾಗಿ ತೊಡಗಿಸಿಕೊಂಡಿದ್ದಾರೆ.

ಅಣ್ಣಾಮಲೈ ರಾಜೀನಾಮೆಯ ಬೆನ್ನಲ್ಲೆ ಯುವ ಐಎಎಸ್ ಅಧಿಕಾರಿ ತಮಿಳುನಾಡಿನವರೇ ಆದ ಸಸಿಕಾಂತ ಸೇಂಥಿಲ್ ಸಹ ತಮ್ಮ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿದರು. ಇನ್ನು ಕರ್ನಾಟಕದವರೇ ಆದ ಪೊಲೀಸ್ ಅಧಿಕಾರಿ ಪಿ. ರಾಜೀವ್ ರಾಜಕೀಯಕ್ಕೆ ಸೇರಿದ್ದಲ್ಲದೆ ಶಾಸಕರೂ ಆಗಿದ್ದಾರೆ. ಈಗ ಈ ಸಾಲಿನಲ್ಲಿ ರವಿ ಡಿ. ಚೆನ್ನಣ್ಣನವರ್ ಕೂಡ ಸೇರುತ್ತಾರಾ ಎಂಬ ಕುತೂಹಲ ಜನರಲ್ಲಿ ಮೂಡಿದೆ.

ರವಿ ಚನ್ನಣ್ಣವರ್ ಸೇರಿದಂತೆ 9 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button