Kannada NewsKarnataka NewsLatest
ಕರ್ನಾಟಕ ಅತ್ಯಂತ ಶ್ರೀಮಂತ ರಾಜ್ಯವಾಗಲಿದೆ ಎಂದು ಮುರುಗೇಶ ನಿರಾಣಿ ಹೇಳಿದ್ದೇಕೆ?

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಸಭೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಜ್ಯದ ಭೂಮಿಯ ಆಳದಲ್ಲಿರುವ ಖನಿಜ ಸಂಪತ್ತಿನ ಸಮಗ್ರ ಸಮೀಕ್ಷೆಗೆ ಅಂತರರಾಷ್ಟ್ರೀಯ ಟೆಂಡರ್ ಕರೆಯಲಾಗಿದೆ. ಈ ಸಮೀಕ್ಷೆಯಿಂದ ರಾಜ್ಯದಲ್ಲಿರುವ ಒಟ್ಟಾರೆ ಖನಿಜ ಸಂಪತ್ತಿನ ನಿಖರ ಮಾಹಿತಿ ದೊರೆಯಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರಾದ ಮುರುಗೇಶ ನಿರಾಣಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ (ಜೂ.10) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಮ್ಮೆ ರಾಜ್ಯದ ಖನಿಜ ಸಂಪತ್ತಿನ ನಿಖರ ಮಾಹಿತಿ ಲಭಿಸಿದರೆ ಅದರ ಸಮರ್ಪಕ ಬಳಕೆಯ ಯೋಜನೆಯನ್ನು ರೂಪಿಸಬಹುದು.
ಐವತ್ತು ವರ್ಷದ ಹಿಂದಿನ ಸಮೀಕ್ಷೆ ಆಧರಿಸಿ ಖನಿಜ ಸಂಪತ್ತು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಅತ್ಯಾಧುನಿಕ ಸಮೀಕ್ಷೆ ಮೂಲಕ ಖನಿಜ ಸಂಪತ್ತು ಪತ್ತೆ ಮಾಡಿದಾಗ ಪ್ರಸ್ತುತ ಸನ್ನಿವೇಶದಲ್ಲಿ ಕರ್ನಾಟಕ ಅತ್ಯಂತ ಶ್ರೀಮಂತ ರಾಜ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಖನಿಜ ಸಂಪತ್ತಿನ ಸದ್ಬಳಕೆ ಮಾಡುವುದರ ಜತೆಗೆ ಉದ್ಯೋಗಗಳನ್ನು ಸೃಷ್ಟಿಸುವುದು ಕೂಡ ತಮ್ಮ ಆದ್ಯತೆಯಾಗಿದೆ ಎಂದು ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ವಿಭಾಗವಾರು ಮೈನಿಂಗ್ ಅದಾಲತ್ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ.
ಅಕ್ರಮ ಗಣಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕೂಡ ಈಗಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಮರಳನ್ನು ಗ್ರೇಡ್ ಪ್ರಕಾರ ವಿಂಗಡಿಸಿ ಅಗತ್ಯತೆ ಆಧರಿಸಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಿತಿಗಳ ಮೂಲಕ ವಿತರಣೆಗೆ ಅನುಕೂಲವಾಗುವಂತೆ ಸ್ಯಾಂಡ್ ಕಾರ್ಪೋರೇಷನ್ ಸ್ಥಾಪಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಕೂಡ ಶೀಘ್ರ ಸೂಕ್ತ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಸ್ಕೂಲ್ ಆಫ್ ಮೈನಿಂಗ್ ಆರಂಭ:
ಸ್ಕೂಲ್ ಆಫ್ ಮೈನಿಂಗ್ ಆರಂಭಿಸಿ ಸುರಕ್ಷಿತ ಗಣಿಗಾರಿಕೆ(ಮೈನಿಂಗ್) ವಿಧಾನಗಳು ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಕುರಿತು ತರಬೇತಿ ನೀಡಲಾಗುವುದು.
ಗಣಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪೊಲೀಸ್ ಮಾದರಿಯಲ್ಲಿ ಸಮವಸ್ತ್ರ, ವಾಕಿಟಾಕಿ, ಭದ್ರತಾ ಸಿಬ್ಬಂದಿಯನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ.
ಸ್ಯಾಂಡ್ ಪಾಲಿಸಿ ಸರಿಯಾಗಿ ಅನುಷ್ಠಾನಗೊಂಡರೆ ಖನಿಜ ಸಂಪತ್ತು ಸಮರ್ಪಕ ಬಳಕೆ ಸಾಧ್ಯವಾಗಲಿದೆ.
ದಂಡ ಪಾವತಿಸದೇ ಇರುವ ಕಾರಣಕ್ಕೆ ಸ್ಥಗಿತಗೊಂಡಿರುವ ಕ್ರಷರ್ ಗಳಿಂದ ಅಫಿಡವೇಟ್ ಪಡೆದುಕೊಂಡು ಅವುಗಳ ಪುನರಾರಂಭಕ್ಕೆ ಅನುಮತಿ ನೀಡಲಾಗುತ್ತಿದೆ.
ಇಂತಹ ಕ್ರಷರ್ ಗಳನ್ನು ಡ್ರೋಣ್ ಮೂಲಕ ಸಮಗ್ರ ಸಮೀಕ್ಷೆ ನಡೆಸಿದ ಬಳಿಕ ಶುಲ್ಕ ಅಥವಾ ಬಾಕಿ ದಂಡ ಪಾವತಿಗೆ ಕ್ರಮ ವಹಿಸಲಾಗುವುದು ಎಂದು ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಸುಸಜ್ಜಿತ ಆಂಬ್ಯುಲೆನ್ಸ್ ಖರೀದಿಗೆ ತೀರ್ಮಾನ:
ಖನಿಜ ನಿಧಿಯಡಿ ರಾಜ್ಯದ ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೆ ಇಲಾಖೆಯ ವತಿಯಿಂದ ಸುಸಜ್ಜಿತವಾದ ಆಂಬ್ಯುಲೆನ್ಸ್ ನೀಡಲು ಚಿಂತನೆ ನಡೆಸಲಾಗುತ್ತಿದೆ.
ಸುಸಜ್ಜಿತವಾದ ಆಂಬ್ಯುಲೆನ್ಸ್, ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಟ್ಯಾಂಕರ್ ಗಳನ್ನು ನೀಡಲು ನಿರ್ಧರಿಸಲಾಗಿದೆ. ಆದಷ್ಟು ಬೇಗನೇ ರಾಜ್ಯಮಟ್ಟದಲ್ಲಿ ಇವುಗಳನ್ನು ಖರೀದಿಸಿ ಪೂರೈಸಲಾಗುವುದು ಎಂದು ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಅದೇ ರೀತಿ ಜಿಲ್ಲಾ ಖನಿಜ ನಿಧಿಯಲ್ಲಿ ಇರುವ ಹಣವನ್ನು ಬಳಕೆ ಮಾಡಿಕೊಂಡು ಕೋವಿಡ್ ತುರ್ತು ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಖರೀದಿಸಬಹುದು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಬೆಳಗಾವಿ ಜಿಲ್ಲೆಗೆ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಹತ್ತು ಆಂಬ್ಯುಲೆನ್ಸ್ ಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವತಿಯಿಂದ ಖನಿಜ ನಿಧಿಯಡಿ ನೀಡಲಾಗುವುದು ಎಂದು ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಜಿಲ್ಲೆಯಲ್ಲಿ ನಿಯಮಿತವಾಗಿ ಟಾಸ್ಕ್ ಫೋರ್ಸ್ ಸಭೆ, ಚೆಕ್ ಪೋಸ್ಟ್ ನಿರ್ಮಾಣ; ಅಗತ್ಯ ಭದ್ರತಾ ಸಿಬ್ಬಂದಿ ಕೂಡ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಜಿಲ್ಲಾ ಖನಿಜ ನಿಧಿಯಲ್ಲಿ ಕೋವಿಡ್ ತುರ್ತು ಚಿಕಿತ್ಸೆಗೆ ಅಗತ್ಯ ಉಪಕರಣಗಳ ಖರೀದಿ ಮತ್ತಿತರ ಸೌಕರ್ಯಕ್ಕಾಗಿ ಬಿಮ್ಸ್ ಗೆ ಒಂದು ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ತಿಳಿಸಿದರು.
ಇದೀಗ ಇಲಾಖೆಯ ವತಿಯಿಂದ ಜಿಲ್ಲೆಯ ಎಲ್ಲ ಹದಿನೆಂಟು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಸಜ್ಜಿತ ಆಂಬ್ಯುಲೆನ್ಸ್ ಗಳನ್ನು ಒದಗಿಸುತ್ತಿರುವುದಕ್ಕೆ ಜಿಲ್ಲಾಧಿಕಾರಿ ಹಿರೇಮಠ ಅವರು ಸಚಿವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಲೋಕೇಶ್ ಅವರು, 2020-21 ನೇ ಸಾಲಿಗೆ ಗಣಿ ಗುತ್ತಿಗೆಗಳ ಮೂಲಕ ನಿಗದಿಪಡಿಸಲಾಗಿದ್ದ 122 ಕೋಟಿ ರೂಪಾಯಿ ಗುರಿಯ ಪೈಕಿ 114 ಕೋಟಿ ಸಂಗ್ರಹಿಸಿ ಶೇ. 93.46 ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.
ವಿಧಾನಪರಿಷತ್ತಿನಲ್ಲಿ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯ ಡಾ.ಸಾಬಣ್ಣ ತಳವಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ