ರಮೇಶ ಜಾರಕಿಹೊಳಿ ಮನೆಗೆ ಪ್ರಭಾಕರ ಕೋರೆ ಹೋಗಿದ್ದೇಕೆ?; ಕೋರೆ ಹೇಳಿದ್ದು 3 ಕಾರಣ
ಎಂ.ಕೆ.ಹೆಗಡೆ, ಬೆಂಗಳೂರು/ಬೆಳಗಾವಿ – ರಾಜ್ಯ ರಾಜಕಾರಣದಲ್ಲಿ ಕಳೆದೊಂದು ವಾರದಿಂದ ತೀವ್ರ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಉಪಚುನಾವಣೆ (ಮುಗಿದಿದ್ದು, ನಡೆಯಬೇಕಾಗಿದ್ದು), ಸಚಿವಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ ಮೊದಲಾದ ಕಾರಣಗಳಿಂದ ಏನು ನಡೆಯುತ್ತಿದೆ ಎನ್ನುವುದೇ ಗೊಂದಲಮಯವಾಗಿದೆ.
ಬಿಜೆಪಿ ನಾಯಕರು ಒಬ್ಬರಾದಮೇಲೊಬ್ಬರು ದೆಹಲಿಗೆ ಓಡುತ್ತಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ವೆಚ್ಚ ಕಡಿತಕ್ಕೆ ಕ್ರಮ ಕೈಗೊಳ್ಳುವ ಬದಲು ಇಷ್ಟು ದಿನ ಖಾಲಿ ಇದ್ದ ನಿಗಮ ಮಂಡಳಿಗಳನ್ನೆಲ್ಲ ಒಮ್ಮೆಲೇ ತುಬುವ ಮೂಲಕ ಇನ್ನಷ್ಟು ಖರ್ಚು ವೆಚ್ಚಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ಸಚಿವಸಂಪುಟ ವಿಸ್ತರಣೆ ಕಗ್ಗಂಟಾಗುತ್ತ ಹೋಗುತ್ತಿದ್ದು, ಹೈಕಮಾಂಡ್ ಗ್ರೀನ್ ಸಿಗ್ನಲ್ ಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಬೆಳಗಾವಿ ರಾಜಕಾರಣವೂ ರಂಗುರಂಗಾಗಿದೆ. ಇಲ್ಲಿನ ಬಹುತೇಕ ಬಿಜೆಪಿ ಶಾಸಕರು ಶಾಸಕಸ್ಥಾನದ ಜೊತೆಗೆ ಇನ್ನಷ್ಟು ಪವರ್ ಫುಲ್ ಹುದ್ದೆಗಳನ್ನು ಪಡೆಯುತ್ತಿದ್ದಾರೆ. ಕಾರ್ಯಕರ್ತರಿಗೆ ಕೊಡಿಸಬಹುದಾದ ಹುದ್ದೆಗಳನ್ನೂ ತಾವೇ ಮಡಗಿಕೊಳ್ಳುತ್ತಿದ್ದಾರೆ. ಇಲ್ಲಿನ ಡಜನ್ ಗಿಂತ ಹೆಚ್ಚಿನ ಶಾಸಕರು, ರಾಜಕಾರಣಿಗಳಿಗೆ ಪವರ್ ಫುಲ್ ಹುದ್ದೆ ಸಿಕ್ಕಿದೆ.
ಜಿಲ್ಲೆಯ ರಾಜಕಾರಣಿಗಳು ಇಷ್ಟೊಂದು ಪವರ್ ಪುಲ್ ಆಗಿದ್ದರೂ ಬೆಳಗಾವಿ ಜಿಲ್ಲೆಗೆ ಹೇಳಿಕೊಳ್ಳುವಂತಹ ಮಹತ್ವದ ಕೊಡುಗೆಯನ್ನೇನೂ ಕೊಟಿಲ್ಲ. ಅವಕಾಶವಿರುವ ಈ ಸಂದರ್ಭದಲ್ಲಿ ಎಲ್ಲ ನಾಯಕರೂ ಒಟ್ಟಾಗಿ ಕುಳಿತು ಜಿಲ್ಲೆಯ ಒಳಿತಿಗೆ ಏನನ್ನಾದರೂ ಮಾಡಬೇಕೆನ್ನುವ ಚಿಂತನೆ ನಡೆಸಿಲ್ಲ, ನಡೆಸುವಂತೆಯೂ ಕಾಣುತ್ತಿಲ್ಲ.
ಜಾರಕಿಹೊಳಿ ಮನೆಗೆ ಪ್ರಭಾಕರ ಕೋರೆ
ರಾಜ್ಯಸಭೆಯ ಮಾಜಿ ಸದಸ್ಯ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಬುಧವಾರ ವಿಧಾನಪರಿಷತ್ ಸರಕಾರದ ಸಚೇತಕ ಮಹಾಂತೇಶ ಕವಟಗಿಮಠ ಅವರೊಂದಿಗೆ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮನೆಗೆ ಭೇಟಿ ನೀಡಿದ್ದರು.
ಬೆಳಗಾವಿ ಲೋಕಸಭಾ ಉಪಚುನಾವಣೆ ಸನ್ನಿಹಿತವಾಗಿರುವ ಈ ಸಂದರ್ಭದಲ್ಲಿ, ರಾಜ್ಯ ರಾಜಕಾರಣದಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಕೋರೆಯವರು ಜಾರಕಿಹೊಳಿ ಮನೆಗೆ ಹೋಗಿದ್ದೇಕೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದು ಅನೇಕ ಊಹಾಪೋಹಗಳಿಗೂ ಕಾರಣವಾಗಿದೆ.
ಪ್ರಭಾಕರ ಕೋರೆ ಬೆಳಗಾವಿ ಲೋಕಸಭೆ ಚುನಾವಣೆಯ ಆಕಾಂಕ್ಷಿಯಾಗಿದ್ದು ಅದಕ್ಕಾಗಿ ರಮೇಶ ಜಾರಕಿಹೊಳಿ ಜೊತೆ ಚರ್ಚಿಸಲು ಹೋಗಿದ್ದರು ಎಂದು ಕೆಲವರು ಹೇಳಿದರೆ, ಯಾವುದಾದರೂ ಮಹತ್ವದ ಹುದ್ದೆ ಪಡೆಯುವುದಕ್ಕಾಗಿ, ಸಧ್ಯಕ್ಕೆ ಶಕ್ತಿ ಕೇಂದ್ರದಂತಾಗಿರುವ ರಮೇಶ ಜಾರಕಿಹೊಳಿ ಮನೆಗೆ ಹೋಗಿದ್ದರು ಎನ್ನುವ ಚರ್ಚೆಯೂ ನಡೆದಿದೆ.
ಯಾವುದೇ ಇಬ್ಬರು ರಾಜಕೀಯ ನಾಯಕರು ಭೇಟಿಯಾದರೂ ಇಂತಹ ವದಂತಿ, ಕಲ್ಪನೆ, ಚರ್ಚೆ ಸಹಜವಾಗಿ ನಡೆಯುತ್ತದೆ. ಇದನ್ನು ಅವರು ಅಲ್ಲಗಳೆದರೂ ಸಂಪೂರ್ಣ ಸುಳ್ಳಂತೂ ಇರುವುದಿಲ್ಲ. ರಾಜಕಾರಣದಲ್ಲಿ ಯಾರೂ ಸಂಪೂರ್ಣ ಸತ್ಯ ಹೇಳುವುದಿಲ್ಲ, ಯಾರೂ ಸತ್ಯ ಹರಿಶ್ಚಂದ್ರರಲ್ಲ. ಸತ್ಯ ಹೇಳಿ ರಾಜಕಾರಣ ಮಾಡುವ ಪರಿಸ್ಥಿತಿಯೂ ಈಗಿಲ್ಲ.
ಕೋರೆ ಹೇಳಿದ್ದು 3 ಕಾರಣ
ತಾವು ರಮೇಶ ಜಾರಕಿಹೊಳಿ ಮನೆಗೆ ಭೇಟಿ ನೀಡಿದ್ದರ ಕುರಿತು ಪ್ರಗತಿವಾಹಿನಿ ಜೊತೆ ಮಾತನಾಡಿದ ಪ್ರಭಾಕರ ಕೋರೆ 3 ಕಾರಣಗಳನ್ನು ನೀಡಿದರು. ರಾಜಕಾರಣದ ಕುರಿತು ಒಂದು ಶಬ್ದವನ್ನೂ ನಾವು ಮಾತನಾಡಿಲ್ಲ ಎಂದರು.
- ರಮೇಶ ಜಾರಕಿಹೊಳಿ ಹೊಸ ಮನೆ ಖರೀದಿಸಿದ್ದಾರೆ. ಮನೆಗೆ ಬರುವಂತೆ ಬಹಳ ದಿನದಿಂದ ಹೇಳುತ್ತಿದ್ದರು. ನಾನು ಕೊರೆನಾ ಕಾರಣದಿಂದ 6 -7 ತಿಂಗಳಿನಿಂದ ಬೆಂಗಳೂರಿಗೆ ಬಂದಿರಲಿಲ್ಲ. ಈಗ ಬಂದಾಗ ಅವರ ಮನೆಗೆ ಭೇಟಿ ನೀಡಿದ್ದೇೆನೆ.
- ಶಿವಶಕ್ತಿ ನೀರಾವರಿ ಯೋಜನೆ ಬಹುಕಾಲದಿಂದ ನನೆಗುದಿಗೆ ಬಿದ್ದಿದೆ. ಮೊನ್ನೆ ನಡೆದ ಸಚಿವಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಗಬೇಕಿತ್ತು. ಆದರೆ ಸಭೆಯ ಮುಕ್ತಾಯದ ವೇಳೆ ಅದು ಸಂಪುಟದ ಮುಂದೆ ಬಂದಿದ್ದರಿಂದ ಅನುಮೋದನೆ ಸಿಕ್ಕಿಲ್ಲ. ಈ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯುವ ಸಂಬಂಧ, ಜಲಸಂಪನ್ಮೂಲ ಸಚಿವರೂ ಆಗಿರುವ ರಮೇಶ ಜಾರಕಿಹೊಳಿ ಅವರ ಬಳಿ ಚರ್ಚಿಸಲು ಹೇಗಿದ್ದೆ.
- ಬೆಳಗಾವಿ ನಗರದಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಜಾಮ್ ಹೆಚ್ಚುತ್ತಿದೆ. ನಮ್ಮ ಕಚೇರಿಯಿಂದ ಮನೆಗೆ ಹೋಗಲು 5 ನಿಮಿಷ ಬೇಕಾದದ್ದು ಈಗ ಅರ್ಧಗಂಟೆ ಸಮಯ ಬೇಕಾಗಿದೆ. ಹಾಗಾಗಿ ರಿಂಗ್ ರಸ್ತೆ ಕಾಮಗಾರಿ ಬೇಗ ಆರಂಭಿಸುವ ಸಂಬಂಧ ಚರ್ಚಿಸಲು ಹೇಗಿದ್ದೆ. ರಿಂಗ್ ರಸ್ತೆಗೆ ರಾಜ್ಯಸರಕಾರ ತನ್ನ ಪಾಲಿನ ಹಣ ತುಂಬುವುದು ಬಾಕಿ ಇದೆ. ಅದು ಆದರೆ ಬೇಗ ಕೆಲಸ ಶುರುವಾಗುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ