ಪ್ರಗತಿವಾಹಿನಿ ಸುದ್ದಿ;
ಜಗದೀಶ ಶೆಟ್ಟರ್ ಬಿಜೆಪಿಗೆ ಬಂದಿರುವುದೇನೂ ಆಪರೇಷನ್ ಕಮಲ ಅಲ್ಲ. ಕಾಂಗ್ರೆಸ್ ಪಕ್ಷದೊಳಗಿನ ಉಸಿರುಗಟ್ಟುವ ವಾತಾವರಣವನ್ನು ತಡೆದುಕೊಳ್ಳಲಾರದೆ ಶೆಟ್ಟರ್ ಮರಳಿ ತಮ್ಮ ಗೂಡು ಸೇರಿದ್ದಾರೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇನೂ ಆಪರೇಷನ್ ಕಮಲ ಅಲ್ಲ. ಜಗದೀಶ ಶೆಟ್ಟರ್ ಅವರು ಸಂಘ ಪರಿವಾರದ ಹಿನ್ನೆಲೆಯಿಂದ ಬೆಳೆದು ಬಂದಿದ್ದಾರೆ. ಅವರು ಮುಸ್ಲಿಮರನ್ನು ಓಲೈಸುವ ಪಕ್ಷಕ್ಕೆ ಏಕಾಏಕಿ ಸೇರಿಬಿಟ್ಟಿದ್ದರು. ರಾಮನವಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ ಎನ್ನುವಂತೆ ಆಗಿತ್ತು. ಮುಸ್ಲಿಮರ ಓಲೈಕೆ ಹಾಗೂ ಹಿಂದೂಗಳ ಕಡೆಗಣನೆಯನ್ನು ನೋಡಿ ಅವರಿಗೆ ಉಸಿರುಗಟ್ಟುವ ವಾತಾವರಣ ಉಂಟಾಗಿತ್ತು. ಶೆಟ್ಟರ್ ಅವರು ಮರಳಿ ಗೂಡಿಗೆ ಬಂದಿರುವುದನ್ನು ತುಂಬು ಹೃದಯದಿಂದ ಸ್ವಾಗತ ಮಾಡಿದ್ದೇವೆ ಎಂದರು.
ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ, ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು, ಮೊದಲಾದ ಕಾರಣಗಳಿಂದ ಇನ್ನಷ್ಟು ನಾಯಕರು ಬಿಜೆಪಿ ಕಡೆ ಬರಲಿದ್ದಾರೆ. ಇನ್ನೇನಿದ್ದರೂ *‘ಕಾಂಗ್ರೆಸ್ ಚೋಡೊ’ ಎಂಬ ಘೋಷಣೆ* ಕೇಳಿಬರಲಿದೆ. ಆಮ್ ಆದ್ಮಿ ಪಕ್ಷ, ಮಮತಾ ಬ್ಯಾನರ್ಜಿಯವರ ಪಕ್ಷ ಕಾಂಗ್ರೆಸ್ ನಾಲಾಯಕ್ ಎಂದು ಓಡಿಸಿದೆ. ಕಾಂಗ್ರೆಸ್ ಪಕ್ಷವನ್ನು ದೆಹಲಿಯಿಂದಲೂ ಹೊರಗೆ ಹಾಕಲಾಗುತ್ತದೆ. ಈ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಧೂಳಿಪಟವಾಗಲಿದೆ ಎಂದರು.
ಬಿಜೆಪಿಯವರು ನಮ್ಮಲ್ಲಿಗೆ ಬಂದರು ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದರು. ಈಗ ಆ ಮಾತುಗಳು ನಿಲ್ಲಲಿದೆ. ಕಾಂಗ್ರೆಸ್ ನಲ್ಲಿ ನಾಯಕರ ಗತಿ ಇಲ್ಲವಾಗಿರುವುದರಿಂದ ನಮ್ಮ ನಾಯಕರನ್ನು ಕರೆಸಿಕೊಳ್ಳುತ್ತಿದ್ದಾರೆ ಎಂದರು.
ಅಭ್ಯರ್ಥಿಗಳ ಆಯ್ಕೆ ಬಗ್ಗೆ ಬಿಜೆಪಿಯ ವರಿಷ್ಠರು ನಿರ್ಧರಿಸಲಿದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ