ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರು ಜಿಲ್ಲೆಯ ಜನರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಎರಡನೇ ಹಾಗೂ ಕೊನೆಯ ಶನಿವಾರ ನಡೆಸುತ್ತಿರುವ ಫೋನ್ ಇನ್ ಕಾರ್ಯಕ್ರಮದ ಮೂರನೇ ಆವೃತ್ತಿಯಲ್ಲೂ ಜನ ತಮ್ಮ ಸಂಕಷ್ಟ ತೋಡಿಕೊಂಡು ಪರಿಹಾರ ಕಂಡುಕೊಂಡರು.
ಬೆಳಗ್ಗೆ 11ಕ್ಕೆ ದೂರವಾಣಿಯ ರಿಸಿವರ್ ಹಿಡಿದ ಎಸ್ಪಿ, “ನಮಸ್ಕಾರ್ರೀ.. ನಾನ್ ಎಸ್ಪಿ ಮಾತಾಡ್ತಾ ಇದೇನಿ ಹೇಳ್ರಿ..” ಎಂದು ಜನಸ್ಪಂದನೆಗೆ ಅಣಿಯಾದರು.
ಸ್ವೀಕರಿಸಲಾದ ಕರೆಗಳಲ್ಲಿ ಅಕ್ರಮ ಮದ್ಯ, ಮಾದಕವಸ್ತುಗಳ ಹಾವಳಿಯ ಪ್ರಕರಣಗಳು ಹೆಚ್ಚು ಬಿಂಬಿತವಾದವು.
ಸವದತ್ತಿ ಹಾಗೂ ಬೈಲಹೊಂಗಲ ತಾಲೂಕುಗಳಲ್ಲಿ ಶಾಲಾ ಆವರಣದ ಬಳಿಯೇ ಮದ್ಯ ಮಾರಾಟ ಮಾಡುತ್ತಿರುವ ದೂರು ಕೇಳಿಬಂತು. ಇದಲ್ಲದೆ ಹೋಟೆಲ್ ಹಾಗೂ ಗ್ಯಾರೇಜ್ ನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರಲಾಯಿತು.
ಬೈಲಹೊಂಗಲ ತಾಲೂಕಿನಲ್ಲಿ ಎಲ್ಲೆ ಮೀರಿದ ಅಕ್ರಮ ಮದ್ಯ ಮಾರಾಟ ಪ್ರಕರಣವೊಂದರ ಹಿಂದೆ ಮಹಿಳೆಯೊಬ್ಬಳು ಕಿಂಗ್ ಪಿನ್ ಆಗಿ ವ್ಯವಹರಿಸುತ್ತಿರುವ ವಿಷಯ ಎಸ್ಪಿಯವರ ಗಮನಕ್ಕೆ ತರಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಸಂಬಂಧಿಸಿದ ಠಾಣೆಗಳ ಪೊಲೀಸರಿಂದ ಕಾರ್ಯಾಚರಣೆ ನಡೆಸಿ ಇದನ್ನು ಮಟ್ಟ ಹಾಕುವ ಭರವಸೆ ನೀಡಿದರು.
ರಾಜ್ಯ ಗಡಿಯ ನಿಪ್ಪಾಣಿಯಲ್ಲಿ ಗಾಂಜಾ ಮಾರಾಟ, ಮಟ್ಕಾ ದಂಧೆಗಳು ಕಡಿವಾಣ ಮೀರಿ ನಡೆಯುತ್ತಿವೆ. ಮಹಾರಾಷ್ಟ್ರದಿಂದ ಗಾಂಜಾ ಸರಬರಾಜು ಆಗುತ್ತಿದೆ ಎಂದು ಕರೆ ಮಾಡಿದವರೊಬ್ಬರು ಮಾಹಿತಿ ನೀಡಿ ಇದಕ್ಕೆ ಪರಿಹಾರ ಕೋರಿದರು.
ಇಂಥ ವ್ಯವಹಾರಗಳಲ್ಲಿ ತೊಡಗಿರುವವರ ಬಗ್ಗೆ ಕ್ಷಿಪ್ರ ಮಾಹಿತಿ ಸಂಗ್ರಹಿಸಿ ಮಟ್ಟಹಾಕುವುದಾಗಿ ಎಸ್ಪಿ ಭರವಸೆಯಿತ್ತರು.
ಬೆಳಗಾವಿ ನಗರ ಪ್ರದೇಶದಿಂದ ಒಟ್ಟು ಆರು ಕರೆಗಳನ್ನು ಸ್ವೀಕರಿಸಲಾಯಿತು. ಈ ಪೈಕಿ ಹಣ ಪಡೆದು ಮೋಸ ಮಾಡಿದ ವ್ಯಕ್ತಿಯೊಬ್ಬನ ವಿರುದ್ಧ ಮಾಳಮಾರುತಿ ಠಾಣೆಯಲ್ಲಿ ದೂರು ನೀಡಿದ್ದರೂ ಕ್ರಮಗಳಾಗದ ಬಗ್ಗೆ ಕರೆ ಮಾಡಿದವರು ಎಸ್ಪಿಯವರ ಗಮನ ಸೆಳೆದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ, ಸಿಪಿಐಗಳಾದ ಬಿ.ಆರ್. ಗಡ್ಡೇಕರ, ಶರಣಬಸಪ್ಪ ಅಜೂರ, ಮಹಾದೇವ ಎಸ್.ಎಂ., ಬಾಳಪ್ಪ ತಳವಾರ ಮತ್ತಿತರರು ಭಾಗವಹಿಸಿ ಜನರ ಅಹವಾಲುಗಳ ವಿವರ ದಾಖಲಿಸಿಕೊಂಡರು.
*ಗಡಿ ವಿವಾದ: ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಭೆ: ಸಿಎಂ ಬೊಮ್ಮಾಯಿ*
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ