
ಪ್ರಗತಿವಾಹಿನಿ ಸುದ್ದಿ: ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಶಾಸಕರು ತೋರಿದ ವರ್ತನೆಗೆ ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿದ ತಮ್ಮ ನಿರ್ಧಾರವನ್ನು ಸ್ಪೀಕರ್ ಯು ಟಿ ಖಾದರ್ ಸಮರ್ಥಿಸಿಕೊಂಡಿದ್ದಾರೆ.
ಕೆಲವು ಜನಪ್ರತಿನಿಧಿಗಳಿಗೆ ಸ್ಪೀಕರ್ ಸ್ಥಾನದ ಘನತೆ ಹಾಗೂ ಪೀಠದ ಗೌರವ ತಿಳಿದಿಲ್ಲದಂತೆ ವರ್ತಿಸಿದ್ದಾರೆ. ಈ ಪೈಕಿ ನೂತನವಾಗಿ ಆಯ್ಕೆಯಾಗಿರುವ ಶಾಸಕರೂ ಇದ್ದಾರೆ. ಸದನದಲ್ಲಿ ಸ್ಪೀಕರ್ ಪೀಠಕಿಂತ ಗೌರವಯುತವಾದದ್ದು ಯಾವುದು ಇಲ್ಲ. ಆ ಪೀಠಕ್ಕೆ ಅಗೌರವ ತೋರುವುದು ಸರಿಯಲ್ಲ. ಹೀಗಾಗಿ ಶಾಸಕರ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಒಂದು ವೇಳೆ ಶಾಸಕರ ವರ್ತನೆ ಹೀಗೆ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಒಂದು ವರ್ಷಗಳ ಕಾಲ ಅಧಿವೇಶನದಿಂದ ಅಮಾನತು ಮಾಡಲು ಕೂಡ ತಾವು ಹಿಂಜರಿಯುವುದಿಲ್ಲ ಹೀಗೆ ಅಮಾನತು ಮಾಡಿರುವ ಶಾಸಕರ ಪೈಕಿ ನನ್ನ ಸ್ನೇಹಿತರೂ ಕೂಡ ಇದ್ದಾರೆ. ಇದನ್ನು ಶಿಕ್ಷೆ ಎಂದು ಪರಿಗಣಿಸದೆ, ತಮ್ಮ ತಪ್ಪನ್ನು ಸರಿ ಪಡಿಸಿಕೊಳ್ಳುವ ಒಂದು ಅವಕಾಶ ಎಂದು ಭಾವಿಸಬೇಕು ಎಂದು ಯು.ಟಿ ಖಾದರ್ ಹೇಳಿದ್ದಾರೆ.