*ಬೆಳಗಾವಿಯಲ್ಲಿ ಈ ಬಾರಿ ಅಧಿವೇಶನ ನಡೆಯುತ್ತೋ? ಇಲ್ವೋ?* *ಗುರುವಾರದ ಸಂಪುಟ ಸಭೆಯತ್ತ ಎಲ್ಲರ ಚಿತ್ತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರತಿ ವರ್ಷದಂತೆ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಡಿಸೆಂಬರ್ 9ರಿಂದ 20ರವರೆಗೆ ನಡೆಯಲಿದೆ ಎನ್ನುವ ಸುದ್ದಿ ಎಲ್ಲೆಡೆ ಹರಡಿದೆ. ಸರಕಾರ ಜಿಲ್ಲಾಡಳಿತಕ್ಕೆ ಈ ಕುರಿತು ಮೌಖಿಕ ಸೂಚನೆ ನೀಡಿದ್ದು, ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.
ವಿಧಾನಸಭೆಯ ಅಧ್ಯಕ್ಷರು ಮತ್ತು ವಿಧಾನ ಪರಿಷತ್ತಿನ ಸಬಾಪತಿಗಳು ಬೆಳಗಾವಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಸಿದ್ಧತಾ ಸಭೆಯನ್ನೂ ನಡೆಸಿದ್ದಾರೆ. ಜಿಲ್ಲಾಡಳಿದ ಅಧಿವೇಶನಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸುತ್ತಿದೆ. ಶಾಸಕರಿಗೆ ಹಾಗೂ ಗಣ್ಯರಿಗೆ ವಸತಿಗೆ ಅಗತ್ಯವಾದ ಕೊಠಡಿಗಳನ್ನು ಕಾಯ್ದಿರಿಸುವ ಕೆಲಸವೂ ನಡೆದಿದೆ.
ಆದರೆ ಈ ಬಾರಿಯ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತೋ, ಇಲ್ವೋ ಎನ್ನುವ ಅನುಮಾನ ಕೂಡ ಇದೆ. ಇದಕ್ಕೆ ಕಾರಣ, ಕಳೆದ ಸಚಿವಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ಒಂದು ಸಾಲಿನ ನಿರ್ಣಯ. ಚಳಿಗಾಲದ ಅಧಿವೇಶನದ ಸ್ಥಳ ಮತ್ತು ದಿನಾಂಕ ನಿರ್ಧರಿಸುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿದೆ ಎಂದು ಸಂಪುಟ ಸಭೆಯ ನಂತರ ಕಾನೂನು ಸಚಿವ ಎಚ್.ಕೆ.ಪಾಟೀಲ ಸುದ್ದಿಗಾರರಿಗೆ ತಿಳಿಸಿದ್ದರು.
ಅಧಿವೇಶನದ ಸ್ಥಳ ಮತ್ತು ದಿನಾಂಕ ನಿರ್ಧರಿಸುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿದೆ ಎನ್ನುವ ಸಾಲು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ದಿನಾಂಕ ನಿರ್ಧರಿಸುವ ಅಧಿಕಾರ ಸರಿ, ಆದರೆ ಸ್ಥಳ ನಿರ್ಧರಿಸುವ ಅಧಿಕಾರದ ಪ್ರಶ್ನೆ ಬಂದಿದ್ದೇಕೆ ಎನ್ನುವುದು ಪ್ರಶ್ನೆ.
ಜಂಟಿ ಅಧಿವೇಶನ, ಎಐಸಿಸಿ ಅಧಿವೇಶನ
1924ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನ ನಡೆದಿತ್ತು. ಅದಕ್ಕೆ ಈಗ ನೂರು ವರ್ಷ. ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಎಐಸಿಸಿ ಅಧಿವೇಶನದ ಶತಮಾನೋತ್ಸವವನ್ನು ಸರಕಾರದಿಂದ ಹಾಗೂ ಕಾಂಗ್ರೆಸ್ ಪಕ್ಷದಿಂದ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಮಿತಿ ರಚನೆ ಹಾಗೂ ಪೂರ್ವಭಾವಿ ಸಭೆಗಳ ಆಯೋಜನೆ ಕೂಡ ಆಗಿದೆ. ಎಐಸಿಸಿ ಅಧಿವೇಶನ ಡಿಸೆಂಬರ್ 26 ಹಾಗೂ 27ರಂದು ನಡೆದಿದ್ದರಿಂದ ಆ ಎರಡು ದಿನ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನೂ ಕರೆಸಲು ಪ್ರಯತ್ನ ನಡೆದಿದೆ. ಇದಕ್ಕೆ ದೊಡ್ಡ ಪ್ರಮಾಣದ ಸಿದ್ಧತೆಯೂ ಆಗಬೇಕಿದೆ.
ಈ ಕಾರ್ಯಕ್ರಮವನ್ನು ಅತ್ಯಂತ ದೊಡ್ಡ ಪ್ರಮಾಣದಲ್ಲಿ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಕಾನೂನು ಸಚಿವ ಎಚ್.ಕೆ.ಪಾಟೀಲ ಅವರ ಅಧ್ಯಕ್ಷತೆ ಹಾಗೂ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಅವರ ಗೌರವಾಧ್ಯಕ್ಷತೆಯಲ್ಲಿ 60ಕ್ಕೂ ಹೆಚ್ಚು ಗಣ್ಯರ ಸಮಿತಿ ರಚಿಸಲಾಗಿದೆ. ಎಲ್ಲರಿಂದ ಸಲಹೆಗಳನ್ನು ಪಡೆಯಲಾಗಿದೆ. ಇಡೀ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಲು, ಕಾಂಗ್ರೆಸ್ ರಸ್ತೆಯಲ್ಲಿ ಬೃಹತ್ ಕಮಾನುಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಜನಸಾಮಾನ್ಯರನ್ನೂ ಒಳಗೊಳಿಸಿಕೊಂಡು ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ವಿಶ್ವ ಕನ್ನಡ ಸಮ್ಮೇಳನದ ನಂತರ ಮತ್ತೊಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಬೆಳಗಾವಿ ಸಜ್ಜಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮೇಲೆ ತೀವ್ರ ಒತ್ತಡ ಬೀಳುವುದರಿಂದ ವಿಧಾನ ಮಂಡಳದ ಚಳಿಗಾಲದ ಅಧಿವೇಶನವನ್ನು ಬೆಳಗಾವಿ ಬದಲು ಬೆಂಗಳೂರಿನಲ್ಲೇ ನಡೆಸಿದರೆ ಉತ್ತಮ ಎನ್ನುವ ಯೋಚನೆಯಲ್ಲಿ ಸರಕಾರ ಇರಬಹುದು. ಡಿ.26 ಅಥವಾ 27ರಂದು ಒಂದು ದಿನ ವಿಧಾನ ಮಂಡಳದ ಜಂಟಿ ಅಧಿವೇಶನ ಮತ್ತು ಒಂದು ದಿನ ಎಐಸಿಸಿ ಅಧಿವೇಶನ ನಡೆಸುವ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಗುರುವಾರ (ನ.14) ಬೆಳಗ್ಗೆ 11 ಗಂಟೆಗೆ ರಾಜ್ಯ ಸಚಿವ ಸಂಪುಟದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬೆಳಗಾವಿ ಅಧಿವೇಶನದ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ