Belagavi NewsBelgaum NewsElection NewsKannada NewsKarnataka NewsPolitics

ವಿಕಸಿತ ಭಾರತಕ್ಕಾಗಿ ಮತ್ತೊಮ್ಮೆ ಅಣ್ಣಾಸಾಹೇಬ ಜೊಲ್ಲೆ ಗೆಲ್ಲಿಸಿ: ಡಾ.ಪ್ರಭಾಕರ ಕೋರೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ಬಿಜೆಪಿಯ 10 ವರ್ಷದ ಆಡಳಿತದಲ್ಲಿ ಭಾರತೀಯರು ಮೆಚ್ಚುವಂತಹ ಆಡಳಿತವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. 370ನೇ ಕಲಂ ರದ್ದುಗೊಳಿಸಿ ಭಾರತದ ಏಕತೆ ಗಟ್ಟಿಗೊಳಿಸಿದ್ದಾರೆ. ಭಾರತವನ್ನು ವಿಶ್ವಗುರುವಾಗಿಸಲು ಪ್ರಧಾನಿ ಮೋದಿ ಕೊಡುಗೆ ಅಪಾರವಾಗಿದೆ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕೆ ಎಲ್ ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಡಾ. ಪ್ರಭಾಕರ ಕೋರೆ ಹೇಳಿದರು.

 ಬುಧವಾರ ಕೇರೂರ ಮತ್ತು ಮಾಂಜರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಅಣ್ಣಾಸಾಹೇಬ ಜೊಲ್ಲೆ ಪರ ಮತಯಾಚನೆ ಮಾಡಿ ಮಾತನಾಡಿ, ರೈತರ ಸಂಕಷ್ಟಕ್ಕೆ ಸ್ಪಂದಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ ವರ್ಷಕ್ಕೆ 6 ಸಾವಿರ ಕೊಟ್ಟರೆ, ಯಡಿಯೂರಪ್ಪನವರು ಮುಖ್ಯಮಂತ್ರಿ ಇದ್ದಾಗ ರಾಜ್ಯ ಸರ್ಕಾರದಿಂದ – 4 ಸಾವಿರ ಕೊಡುತ್ತಿದ್ದರು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ರೈತರಿಗೆ ನೀಡುತ್ತಿದ್ದ 4 ಸಾವಿರ ರೂ. ಬಂದ್ ಮಾಡಿತು. ರೈತ ವಿರೋಧಿ ನಿರ್ಣಯ ಮಾಡಿದ ಇವರು ರೈತರ ಪರಾನಾ ಎಂದು ಪ್ರಶ್ನಿಸಿದ ಅವರು, ಪ್ರಧಾನಿ ಮೋದಿ ಅವರ ಆಡಳಿತದ ಅವಧಿಯಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ  ಸಾಕಷ್ಟು ಅಭಿವೃದ್ಧಿಪರ ಕೆಲಸ ಮಾಡಿ ತೋರಿಸಿದ್ದಾರೆ. ಆದ್ದರಿಂದ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡೋಣ ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಮಾಡಿ ಹಿಂದೂ ಸಮಾಜದ ಗೌರವವನ್ನು ಪ್ರಧಾನಿ ಮೋದಿ ಎತ್ತಿ ಹಿಡಿದಿದ್ದಾರೆ. ಬಹಳ ವಷರ್ಗಳಿಂದ ಕಗ್ಗಂಟಾಗಿದ್ದ ದೇಶದ ಅನೇಕ ಸಮಸ್ಯೆಗಳು ಮೋದಿ ಆಡಳಿತದಲ್ಲಿ ಬಗೆಹರಿದಿದೆ. ಜಲಜೀವನ ಮಿಶನ್ ಮೂಲಕ ಮನೆ ಮನೆಗೆ ನಲ್ಲಿ ನೀರು ಒದಗಿಸಲಾಗುತ್ತಿದೆ. ಉಜ್ವಲ ಯೋಜನೆಯಡಿ ಸುಮಾರು 13 ಕೋಟಿ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗಿದೆ. ಆಯುಷ್ಮಾನ್ ಭಾರತ್ ಅಡಿಯಲ್ಲಿ ಉಚಿತ ಆರೋಗ್ಯ ಚಿಕಿತ್ಸೆ, ರಾಷ್ಟ್ರೀಯ ಶಿಕ್ಷಣ ನೀತಿ ಮುಂತಾದ ಅಭಿವೃದ್ಧಿ ಕಾರ್ಯಗಳಿಂದ ದೇಶವನ್ನು ಸದೃಢಗೊಳಿಸುತ್ತಿದ್ದಾರೆ. ಬಿಜೆಪಿ ಅಭಿವೃದ್ಧಿಪರ ಆಡಳಿತ ಸಹಿಸದ ಕಾಂಗ್ರೆಸ್ ರಾಜ್ಯ, ದೇಶವನ್ನು ದಿವಾಳಿಯತ್ತ ಕೊಂಡೊಯ್ಯುವ ಹುನ್ನಾರ ನಡೆಸಿದೆ. ದೇಶದ ಅಭಿವೃದ್ಧಿ, ಭದ್ರತೆ, ಅಖಂಡತೆಗಾಗಿ ಬರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಪ್ರಧಾನಿ ಮೋದಿ ಕೈ ಬಲಪಡಿಸೋಣ ಎಂದು ಹೇಳಿದರು.

 ಈ ವೇಳೆ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ್ ಕವಟಗಿಮಠ ಮಾತನಾಡಿ ದೇಶ ವಿಕಾಸದತ್ತ ಸಾಗುತ್ತಿದೆ. ಬರುವ 2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವ ನಿಟ್ಟಿನಲ್ಲಿ ವಿಶ್ವದ ಮೂರನೇ ಬಹುದೊಡ್ಡ ಆರ್ಥಿಕಶಕ್ತಿಯನ್ನಾಗಿಸಲು ಬಿಜೆಪಿ ಸಂಕಲ್ಪ ಮಾಡಿದೆ. ಆದರೆ ಬೇಲ್ ಮೇಲಿರುವ ಕಾಂಗ್ರೆಸ್ ಹಾಗೂ ಇಂಡಿಯಾ ಮುಖಂಡರು  ಶತಾಯಗತಾಯ ಅಧಿಕಾರಕ್ಕೆ ಬರುವ ವ್ಯರ್ಥ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು 

 ಈ ವೇಳೆ ಬಿಜೆಪಿ ಅಭ್ಯರ್ಥಿಯಾದ ಅಣ್ಣಾಸಾಹೇಬ್ ಜೊಲ್ಲೆ ಮಾತನಾಡಿ, ಏನಾದರೂ ಅಭಿವೃದ್ಧಿ ಕಾಣಬೇಕಾದಲ್ಲಿ ಬಿಜೆಪಿಯನ್ನು ಬೆಂಬಲಿಸಿ, ಆದರೆ ಕಾಂಗ್ರೆಸ್ ಬೆಂಬಲಿಸಿ ನಿಮ್ಮ ಮತವನ್ನು ಹಾಳು ಮಾಡಿಕೊಳ್ಳಬೇಡಿ. ಅನ್ನ (ಅಕ್ಕಿ) ನರೇಂದ್ರ ಮೋದಿಯದ್ದು, ಆದರೆ ಭಾಗ್ಯ ಸಿದ್ದರಾಮಯ್ಯನದು. ಗ್ಯಾರಂಟಿ ಯೋಜನೆಯ ಆಮಿಷ ಒಡ್ಡಿ ಅಧಿಕಾರಕ್ಕೆ ಬಂದು ದೇಶವನ್ನು ಹಾಳು ಮಾಡಲು ಹೊರಟದ್ದಾರೆ. ಕೋವಿಡ್ ಸಮಯದಲ್ಲಿ ಲಸಿಕೆ ಸಿದ್ಧಪಡಿಸಿ ದೇಶದ ಜನತೆಗೆ ನೀಡುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕನೊಬ್ಬ ಲಸಿಕೆ ಪಡೆದರೆ ಮಕ್ಕಳಾಗಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದ, ಇಂತಹ ನಾಯಕರನ್ನು ಹೊಂದಿರುವ ಪಕ್ಷವನ್ನು ದೇಶದ ಜನತೆ ಮತ್ತೆ ಮನೆಯಲ್ಲಿ ಕೂರಿಸಲಿದ್ದಾರೆ ಎಂದರು. ಮೋದಿ ಎಂದರೆ ಕೇವಲ ಭಾರತವಷ್ಟೆ ಅಲ್ಲ, ಬದಲಾಗಿ ಇಡೀ ಜಗತ್ತಿನ ಸಂಪತ್ತು. ಈ ಸಂಪತ್ತು ಉಳಿಸುವ ನಿಟ್ಟಿನಲ್ಲಿ ಈ ಬಾರಿ 400 ಸೀಟ್‌ಗಳನ್ನು ಗೆಲ್ಲಿಸುವ ಮೂಲಕ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವಂತೆ ಮನವಿ ಮಾಡಿಕೊಂಡರು.

 ಈ ಕಾರ್ಯಕ್ರಮಕ್ಕೆ ಮಾಜಿ ಶಾಸಕರಾದ ಕಲ್ಲಪ್ಪಣ್ಣ ಮಗೆಣ್ಣವರ್, ಬಾಳಾ ಸಾಹೇಬ್ ವಡ್ಡರ್, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಅಪ್ಪಾಜಿಗೋಳ್, ಚಿದಾನಂದ ಕೋರೆ, ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಜಿತರಾವ್ ದೇಸಾಯಿ,  ಮಹಾವೀರ ಕಾತ್ರಾಳೆ,  ದತ್ತ ಶೇತ್ಕರಿ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಯಾದವ್, ಸುರೇಶ್ ಪಾಟೀಲ್ ಹಾಗೂ ಭಾರತೀಯ ಜನತಾ ಪಕ್ಷದ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು. ಸನತ್ ಕುಮಾರ್ ಪಾಟೀಲ್ ಸ್ವಾಗತಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button