Karnataka News

*ಎಣ್ಣೆ ಪ್ರಿಯರಿಗೆ ಶಾಕ್: ನ.20ರಂದು ರಾಜ್ಯಾದ್ಯಂತ ಮದ್ಯದಂಗಡಿ ಬಂದ್*

ಪ್ರಗತಿವಾಹಿನಿ ಸುದ್ದಿ: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ , ಲಂಚ ಸ್ವೀಕಾರ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮದ್ಯ ಮಾರಾಟಗಾರರ ಒಕ್ಕೂಟ ನ.20ರಂದು ಮದ್ಯದಂಗಡಿ ಬಂದ್ ಗೆ ಕರೆ ನೀಡಿದೆ.

ಅಬಕಾರಿ ಇಲಾಖೆಯಲ್ಲಿ ಕೋಟಿ ಕೋಟಿ ಭ್ರಷ್ಟಾಚಾರ, ಲಂಚ ಸ್ವೀಕಾರದ ಬಗ್ಗೆ ಆರೋಪ ಕೇಳಿಬಂದಿದ್ದು, ಅಬಕಾರಿ ಸಚಿವರನ್ನು ಬದಲಿಸಬೇಕು ಎಂದು ಮದ್ಯದಂಗಡಿ ಮಾಲೀಕರು ಒತ್ತಾಯಿಸಿದ್ದಾರೆ.

ಇದೀಗ ನ.20ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್ ಮಾಡಿ ಪ್ರತಿಭಟನೆ ನಡೆಸಲು ಮದ್ಯದಂಗಡಿ ಮಾಲೀಕರು ನಿರ್ಧರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮದ್ಯದಂಗಡಿ ಮಾಲೀಕರ ಸಭೆ ನಡೆಸಬೇಕು. ಹಣಕಾಸು ಇಲಾಖೆಯೊಂದಿಗೆ ನಮ್ಮ ಇಲಾಖೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ವೈನ್ ಮರ್ಚೆಟ್ಸ್ ಅಸೋಸಿಯೇಶನ್ ಲಿಕ್ಕರ್ ಮಾರಾಟ ಬಂದ್ ಗೆ ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ ವಿರೋಧ.

ಬೆಂಗಳೂರು ;  ವೈನ್ ಮರ್ಚೆಂಟ್ ಅಸೋಶಿಯೇಶನ್ ಇದೇ 20 ರಂದು ಕರೆ ನೀಡಿರುವ ಲಿಕ್ಕರ್ ಮಾರಾಟ ಬಂದ್ ಗೆ  ನಮ್ಮ ವಿರೋಧವಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸದ್ಯೋಮ ಹೋಟೆಲ್ ಮಾಲೀಕ ಸಂಘ ತಿಳಿಸಿದೆ.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಉಮೇಶ್ ಬಾಳಿ, ಪ್ರಧಾನ ಕಾರ್ಯದರ್ಶಿ ಗೋವಿಂದ. ದು.ಕೌಲಗಿ, ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ಇದುವರೆಗೂ ನಮ್ಮನ್ನು ಬೇಟಿಯಾಗಿಲ್ಲ, ಬಂದ್ ಕುರಿತು ಮಾತನಾಡಿಲ್ಲ,ಬಂದ್ ನಿಂದ ಸಾವಿರಾರು ಕೋಟಿ ರೂಪಾಯಿ‌ ನಷ್ಟವಾಗಲಿದೆ, 2016ರಲ್ಲೇ ನಮ್ಮ ಸಂಘ ನೊಂದಣಿಯಾಗಿದೆ ಎಂದು ಹೇಳಿದರು.

ಪ್ರವಾಸದ್ಯೋಮ ಹಾಗೂ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದು ಎರಡು ಸಾವಿರಕ್ಕಿಂತ ಅಧಿಕ ಹೋಟೆಲ್ ಗಳು ಕಾರ್ಯನಿರ್ವಹಿಸುತ್ತಿವೆ, ಪ್ರವಾಸೋದ್ಯಮದ ಅಡಿಯಲ್ಲಿ ನಡೆಯುತ್ತಿರುವ ಹೋಟೆಲ್, ಬಾರ್ ಗಳು ಹೆಚ್ಚಿನ ಪ್ರಮಾಣದ ಲೈಸನ್ಸ್ ಭರಿಸುತ್ತಿದ್ದು,ವಾರ್ಷಿಕ ಶುಲ್ಕವನ್ನು ಕಡಿಮೆ ಮಾಡಿ ಲಾಭಾಂಶವನ್ನು ಶೇ 10ರಿಂದ 20ರಷ್ಟು ಹೆಚ್ಚಿಸ ಬೇಕು, ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರು ಮಧ್ಯ ಸೇವನೆ ಹಾಗೂ ಊಟೋಪಚಾರ ಮಾಡಲು ದಿನದ 24ಗಂಟೆ ಸೇವೆಗೆ ಅವಕಾಶ ನೀಡಬೇಕು,ಜಿಎಸ್ ಟಿ, ಆಸ್ತಿ ತೆರಿಗೆ,ಇತರೆ ತೆರಿಗೆಯಲ್ಲಿ ರಿಯಾಯಿತಿ ನೀಡಬೇಕು ಎಂದು ಹೇಳಿದರು.

ಅಬಕಾರಿ ಇಲಾಖೆಯ ಸಿ,ಎಲ್ 2 ಅಂಗಡಿಗಳಲ್ಲಿ ಮಧ್ಯ ಸೇವನೆಗೆ ಅವಕಾಶ ಮತ್ತು ಗ್ರಾಮೀಣ ಪ್ರದೇಶ ಮತ್ತು ಡಾಬಾಗಳಲ್ಲಿ‌ ಯಥೇಚ್ಚಚಾಗಿ ಮಧ್ಯ ಮಾರಾಟಕ್ಕೆ ಅವಕಾಶ ನೀಡುತ್ತಿರುವುದರಿಂದ ಪ್ರವಾಸಿ ಹೋಟೆಲ್, ಬಾರ್ ಗಳಿಗೆ ಬಾರೀ ತೊಂದರೆಯಾಗಿದೆ,ಸಿ.ಎಲ್ 9 ಸನ್ನದುದಾರರಿಗೆ ಎಂ.ಆರ್.ಪಿ ದರದಲ್ಲಿ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ,ಸಿ.ಎಲ್ 7, ಸಿಎಲ್ 8, ಸಿಎಲ್ 4 ಸನ್ನದುದಾರರಿಗೆ ಮದ್ಯ ಮಾರಾಟ ಮಾಡಲು ತೊಂದರೆಯಾಗಿದೆ ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button