
ಪ್ರಗತಿವಾಹಿನಿ ಸುದ್ದಿ: ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಸುಮಾರು 30 ವರ್ಷಗಳ ಕಾಲ ಜೀತದಾಳಾಗಿ ಕೆಲಸ ಮಾಡಿಸಿಕೊಂಡಿರುವ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ.
ಊಡುಪಿ ತಾಲೂಕಿನ ಕನ್ಯಾನ ಗ್ರಾಮದ ಕಬ್ಬೈಲು ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. 65 ವಯಸ್ಸಿನ ಸಂತ್ರಸ್ತ ವ್ಯಕ್ತಿ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಇವರನ್ನು ಸುಮಾರು 30 ವರ್ಷಗಳ ಹಿಂದೆ ಕುಂದಾಪುರದ ಹೆಮ್ಮಾಡಿ ಸಮೀಪದ ಕಬ್ಬೈಲು ನಿವಾಸಿ ಸುಬ್ಬಣ್ಣ ಶೆಟ್ಟಿ ಅವರು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದರು. ಸುಬ್ಬಣ್ಣ ಶೆಟ್ಟಿ ಅವರು ಮೃತಪಟ್ಟ ಬಳಿಕ ಅವರ ಮಗಳು ರಜನಿ ಶೆಟ್ಟಿ ಮತ್ತು ಅಳಿಯ ಕರುಣಾಕರ ಶೆಟ್ಟಿ ಅವರು ಆ ವ್ಯಕ್ತಿಯನ್ನು ಮನೆಯ ದನ ಕಾಯುವುದು, ತೋಟದ ಕೆಲಸ ಸೇರಿದಂತೆ ವಿವಿಧ ಕೆಲಸಗಳಿಗೆ ಬಳಸಿಕೊಂಡಿದ್ದಾರೆ
ಸಂತ್ರಸ್ತ ವ್ಯಕ್ತಿಯಿಂದ ದನ-ಎಮ್ಮೆ ನೋಡಿಕೊಳ್ಳುವುದು, ಸಗಣಿ ತೆಗೆದು ಗದ್ದೆ ಕೆಲಸ ಮಾಡುವುದು ಹಾಗೂ ಮನೆಯ ಶೌಚಾಲಯ ಸ್ವಚ್ಛತೆ ಮಾಡಿಸುವ ಕೆಲಸ ಮಾಡಿಸಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇವರನ್ನು ಸುಮಾರು 30 ವರ್ಷಗಳಿಂದ ಬಲವಂತವಾಗಿ ಜೀತದಾಳಾಗಿ ಕೆಲಸ ಮಾಡಿಸಿಕೊಂಡು ಸರಿಯಾದ ಕೂಲಿ ನೀಡದೆ, ಮೂಲಭೂತ ಸೌಕರ್ಯಗಳನ್ನೂ ಒದಗಿಸದೆ ದನದ ಕೊಟ್ಟಿಗೆಯಲ್ಲೇ ಮಲಗಲು ಒತ್ತಾಯಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಅಲ್ಲದೇ, ಸಂಬಳ ನೀಡದೆ ಮನೆಯಿಂದ ಹೊರಗೆ ಹೋಗಲು ಬಿಡದೆ ದೌರ್ಜನ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸಿದ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಹೆಚ್.ಡಿ. ಕುಲಕರ್ಣಿ ಅವರು ಆರೋಪಿ ರಜನಿ ಶೆಟ್ಟಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.




