*ವಿವಾಹಿತ ಹಿಂದೂ ಮಹಿಳೆಗೆ ಮದುವೆಯಾಗುವಂತೆ ಮುಸ್ಲಿಂ ಯುವಕನ ಒತ್ತಾಯ: ಒಪ್ಪದಿದ್ದಕ್ಕೆ ಚಾಕುವಿನಿಂದ ಇರಿದು ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ವಿವಾಹಿತ ಹಿಂದೂ ಮಹಿಳೆಯ ಹಿಂದೆ ಬಿದ್ದ ಮುಸ್ಲಿಂ ಯುವಕನೊಬ್ಬ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದು, ಮಹಿಳೆ ಒಪ್ಪದಿದ್ದಾಗ ನಡು ರಸ್ತೆಯಲ್ಲಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಈ ಘಟನೆ ನಡೆದಿದ್ದು, ಇಡೀ ಜಿಲ್ಲೆಯೇ ಬೆಚ್ಚಿ ಬಿದ್ದಿದೆ. ರಂಜಿತಾ ಎಂಬ ಮಹಿಳೆಯನ್ನು ಮುಸ್ಲಿಂ ಯುವಕ ರಫೀಕ್ ಎಂಬಾತ ಹಾಡಹಗಲೇ ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿದ್ದಾನೆ.
ರಂಜಿತಾಳಿಗೆ ವಿವಾಹವಾಗಿ ಒಂದು ಮಗುವಿತ್ತು. ಆದರೆ ಹತ್ತು ವರ್ಷಗಳ ಹಿಂದೆಯೇ ಪತಿ ರಂಜಿತಾಳಿಗೆ ವಿಚ್ಛೇದನ ನೀಡಿದ್ದ. ರಂಜಿತಾ ಯಲ್ಲಾಪುರದಲ್ಲಿ ತನ್ನ ತಂದೆ-ತಾಯಿ-ಅಣ್ಣನೊಂದಿಗೆ ವಾಸವಾಗಿದ್ದರು. ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಯುವಕ ರಫೀಕ್ ಕುಟುಂಬ ರಂಜಿತಾ ತಂದೆ-ತಾಯಿಗೂ ಪರಿಚಯದವರೇ ಆಗಿದ್ದರು. ಹಾಗಾಗಿ ರಫೀಕ್ ಆಗಾಗ ರಂಜಿತಾಳ ಮನೆಗೂ ಬಂದುಹೋಗುತ್ತಿದ್ದ.
ರಂಜಿತಾಳ ಬಗ್ಗೆ ತಿಳಿದಿದ್ದ ರಫೀಕ್ ಆಕೆಯನ್ನು ಪ್ರೀತಿಸುತ್ತಿದ್ದನಂತೆ. ಆದರೆ ರಂಜಿತಾ ಇದಕ್ಕೆ ಒಪ್ಪಿರಲಿಲ್ಲ. ರಂಜಿತಾಳಿಗೆ ರಫೀಕ್ ತನ್ನನ್ನು ಮದುವೆಯಾಗುವಂತೆ ಕೇಳಿದ್ದ, ರಂಜಿತಾ ತಾನು ಮದುವೆಯಾಗಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಳು. ಆದರೂ ಕೆಲ ದಿನಗಳ ಹಿಂದೆ ರಂಜಿತಾಳಿಗೆ ತನ್ನನ್ನು ಮದುವೆಯಾಗಬೇಕು ಎಂದು ಬಲವಂತ ಮಾಡಿದ್ದ. ರಂಜಿತಾ ತಾನು ಯಾವ ಕಾರಣಕ್ಕೂ ಮದುವೆಯಾಗಲ್ಲ. ಈಗಾಗಲೇ ಒಂದು ಮದುವೆಯಾಗಿ ಅನುಭವಿಸಿರುವ ನೋವು, ಸಂಕಷ್ಟವೇ ಸಾಕಾಗಿದೆ ಎಂದು ಹೇಳಿದ್ದಳು.
ಇದಾದ ಬಳಿಕ ಇಂದು ಎಂದಿನಂತೆ ಶಾಲೆಯಿಂದ ಮನೆಗೆ ಬರುತ್ತಿದ್ದ ರಂಜಿತಾಳನ್ನು ರಸ್ತೆ ಮಧ್ಯೆ ತಡೆದಿದ್ದ ರಫೀಕ್ ಮತ್ತೆ ತನ್ನನ್ನು ಮದುವೆಯಾಗು ಎಂದು ಶುರುಮಾಡಿದ್ದ. ರಂಜಿತಾ ಮತ್ತೆ ನಿರಾಕರಿಸಿದ್ದಳು. ಸಿಟ್ಟಿಗೆದ್ದು ಮದುವೆಯಾಗುತ್ತೀಯಾ ಇಲ್ಲವಾ ಎಂದು ಗದರಿದ್ದ. ರಂಜಿತಾ ತಾನು ಮದುವೆಯಾಗಲ್ಲ ಎಂದು ಮತ್ತೆ ಮತ್ತೆ ಸ್ಪಷ್ಟವಾಗಿ ನಿರಾಕರಿಸಿದ್ದಳು.
ಇದೇ ವೇಳೆ ಚಾಕುವನ್ನು ತೆಗೆದು ರಂಜಿತಾಳಿಗೆ ಮನಬಂದಂತೆ ಇರಿದು ರಫೀಕ್ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾಗಿದ್ದ ರಂಜಿತಾ ರಸ್ತೆಯಲ್ಲಿಯೇ ಬಿದ್ದಿದ್ದಳು. ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ರಂಜಿತಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.
ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಆರೋಪಿಗಾಗಿ ಹುಡುಕಾಟ ನಡೆಸಲಾಗಿದೆ. ಇನ್ನೊಂದೆಡೆ ಕೊಲೆ ಪ್ರಕರಣ ಖಂಡಿಸಿ ಹಿಂದೂಪರ ಸಂಘಟನೆಗಳು ನಾಳೆ ಪ್ರತಿಭಟನೆಗೆ ಕರೆ ಕೊಟ್ಟಿದ್ದು, ಯಲ್ಲಾಪುರ ಬಂದ್ ಗೆ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.


