*ಬರೋಬ್ಬರಿ 9 ಜನರನ್ನು ವಿವಾಹವಾಗಿ ವಂಚಿಸಿದ ಮಹಿಳೆ: ಅವಿವಾಹಿತ ಪುರುಷರೇ ಈಕೆಯ ಟಾರ್ಗೆಟ್*

ಪ್ರಗತಿವಾಹಿನಿ ಸುದ್ದಿ: ಇಲ್ಲೋರ್ವ ಮಹಿಳೆ ಅವಿವಾಹಿತ ಪುರುಷರನ್ನೇ ಟಾರ್ಗೆಟ್ ಮಾಡಿ ಬರೋಬ್ಬರಿ 9 ಜನರನ್ನು ಮದುವೆಯಾಗಿ ವಂಚ್ಸಿರುವ ಘಟನೆ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನಕಲಿ ವಿವಾಹಗಳ ಮೂಲಕ ಹಣ ಮತ್ತು ಆಭರಣ ದೋಚುತ್ತಿದ್ದ ವಧುವಿನ ಗ್ಯಾಂಗ್ ನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಮಹಿಳೆಯೊಬ್ಬರು ಏಜೆಂಟ್‌ಗಳ ಸಹಾಯದಿಂದ ಹಲವು ಪುರುಷರನ್ನು ಮದುವೆಯಾಗಿ, ಕೆಲವೇ ದಿನಗಳಲ್ಲಿ ಬೆಲೆಬಾಳುವ ವಸ್ತುಗಳೊಂದಿಗೆ ಎಸ್ಕೇಪ್ ಆಗುತ್ತಿದ್ದಳು.
ಅವಿವಾಹಿತ ಪುರುಷರು ಕನ್ಯೆ ನೋಡಲೆಂದು ಯೋಗೇಶ್ ಶಿಂಧೆ ಎಂಬಾತ ಮಧ್ಯವರ್ತಿಗಳ ಮೂಲಕ ಈ ಮಹಿಳೆಯನ್ನು ಪರಿಚಯ ಮಾಡಿಕೊಂಡು ಮದುವೆಯಾಗಿದ್ದರು. ಏಜೆಂಟರು ಮದುವೆ ಏರ್ಪಡಿಸಲು ಅವರಿಂದ ದೊಡ್ಡ ಮೊತ್ತದ ಹಣ ಪಡೆದಿದ್ದರು. ಶಾಸ್ತ್ರೋಕ್ತವಾಗಿ ಮದುವೆಯಾದ ಕೆಲವೇ ದಿನಗಳಲ್ಲಿ ವಧು ಮತ್ತು ಏಜೆಂಟರು ಕಣ್ಮರೆಯಾದಾಗ ವಂಚನೆಯ ಅಸಲಿ ಮುಖವಾಡ ಬಯಲಾಗಿದೆ.
ಆರೋಪಿ ಮಹಿಳೆ ಯೋಗೇಶ್ ಗಿಂತ ಮೊದಲೇ ಎಂಟು ಪುರುಷರನ್ನು ಮದುವೆಯಾಗಿದ್ದು, ಪ್ರತಿ ಬಾರಿಯೂ ಹಣ ಮತ್ತು ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಳು. ಮದುವೆಗೆ ಮುನ್ನ ಆಕೆಯ ಹಿಂದಿನ ವಿವಾಹಗಳ ಬಗ್ಗೆ ಯೋಗೇಶ್ ಗೆ ಯಾವುದೇ ವಿಚಾಅರ ತಿಳಿದಿರಲಿಲ್ಲ. ಮನೆಯಲ್ಲಿದ್ದ ಚಿನ್ನಾಭರಣಗಳ ಜೊತೆ ಪತ್ನಿ ನಾಪತ್ತೆಯಾದಾಗ ದೂರು ನೀಡಿದ ಬೆನ್ನಲ್ಲೇ ತನಿಖೆ ವೇಳೆ ಆಕೆಯ ಹಿಂದೆ ದೊಡ್ಡ ಗ್ಯಾಂಗ್ ಇದೆ ಎಂಬುದು ಬಯಲಾಗಿದೆ.
ಈ ಜಾಲವು ಬೀಡ್ ಜಿಲ್ಲೆಯ ಗ್ರಾಮೀಣ ಭಾಗದ ಅವಿವಾಹಿತ ಪದವಿಧರ ಪುರುಷರನ್ನು ಗುರಿಯಾಗಿಸಿಕೊಂಡಿದೆ. ವಧು ಸಿಗದೆ ಮದುವೆಗೆ ಪರದಾಡುತ್ತಿದ್ದ ಕುಟುಂಬಗಳ ದೌರ್ಬಲ್ಯವನ್ನು ಬಳಸಿಕೊಳ್ಳುವ ಈ ಗ್ಯಾಂಗ್, ಮದುವೆ ಮಾಡಿಸುವ ನೆಪದಲ್ಲಿ ಭಾರಿ ಮೊತ್ತವನ್ನು ವಸೂಲಿ ಮಾಡುತ್ತಿತ್ತು.
ಘಟನೆಯಿಂದ ಅಘಾತಕ್ಕೊಳಗಾದ ಯೋಗೇಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ತಮಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ. ಲಕ್ಷಾಂತರ ರೂಪಾಯಿ ವಂಚನೆಯಿಂದ ನಾನು ಆತ್ಮಹತ್ಯೆಯ ಆಲೋಚನೆಯಲ್ಲಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.
ಪ್ರಸ್ತುತ ಚಕ್ಲಾಂಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.




