Wanted Tailor2
Cancer Hospital 2
Bottom Add. 3

*ಬೆಳಗಾವಿ: ಕುಡುಕ ಗಂಡನ ಹುಚ್ಚಾಟಕ್ಕೆ ಬೇಸತ್ತು ಪತ್ನಿಯಿಂದಲೇ ಪತಿಯ ಹತ್ಯೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕುಡುಕ ಗಂಡನ ಹಿಂಸೆ, ಹುಚ್ಚಾಟಕ್ಕೆ ಬೇಸತ್ತ ಪತ್ನಿ ಪತಿಯನ್ನೇ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ನಡೆದಿದೆ.

ಬಾಬು ಕೊಲೆಯಾದ ವ್ಯಕ್ತಿ. ನಾಲ್ಕು ದಿನಗಳ ಹಿಂದೆ ಬಾಬು ಮನೆಯಲ್ಲಿ ಮಲಗಿದ್ದಲ್ಲಿಯೇ ಶವವಾಗಿ ಪತ್ತೆಯಾಗಿದ್ದ. ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಪತ್ನಿ ಮಾದೇವಿ ಕಣ್ಣೀರಿಟ್ಟಿದ್ದಳು. ಆದರೆ ಮೃತದೇಹದ ಕತ್ತಿನಲ್ಲಿದ್ದ ಕಲೆ ಕಂಡು ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕಾಗಮಿಸಿದ ನಂದಗಡ ಪೊಲೀಸರು ಪತ್ನಿ ಮಾದೇವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪತಿಯನ್ನು ತಾನೇ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾಳೆ.

ಬಾಬು ಹಾಗೂ ಮಾದೇವಿ 16 ವರ್ಷಗಳ ಹಿಂದೆ ವಿವಾಹವಾಗಿ ಇಬ್ಬರು ಮಕ್ಕಳಿದ್ದರು. ಮಗಳು ಹಾಸ್ಟೇಲ್ ನಲ್ಲಿ ಉಳಿದುಕೊಂಡು ಓದುತ್ತಿದ್ದರೆ ಮಗ ಇನ್ನೂ ಚಿಕ್ಕವನಾಗಿದ್ದ. ಪತಿ ಬಾಬು ಕುಡಿತದ ದಾಸನಾಗಿದ್ದ. ಪ್ರತಿದಿನ ಕುಡಿದು ಬಂದು ಪತ್ನಿಗೆ ಹಿಂಸಿಸುತ್ತಿದ್ದನಂತೆ ಅಲ್ಲದೇ ಇದ್ದ 40 ಎಕರೆ ಜಮೀನಿನಲ್ಲಿ 26 ಎಕರೆ ಜಮೀನು ಮಾರಾಟ ಮಾಡಿ ಬಂದಿದ್ದ ಹಣವನ್ನೂ ಕುಡಿತದ ಚಟಕ್ಕಾಗಿ ಖಾಲಿ ಮಾಡಿದ್ದನಂತೆ. ಉಳಿದ ಜಮೀನನ್ನು ಮಾರಾಟ ಮಡಲು ಸಿದ್ಧತೆ ನಡೆಸಿದ್ದನಂತೆ ಇದರಿಂದ ನೊಂದು ಹೋಗಿದ್ದ ಮಾದೇವಿ ಉಳಿದ ಜಮೀನು ಮಾರಿದರೆ ಎಲ್ಲರೂ ಬೀದಿಪಾಲಾಗುತ್ತೇವೆ ಎಂದು ಬೇರೆ ದಾರಿ ಇಲ್ಲದೇ ಪತಿಯನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ.

ಅ.31ರಂದು ರಾತ್ರಿ ಪತಿಗೆ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿಕೊಟ್ಟಿದ್ದಾಳೆ. ಪತಿ ಗಾಡ ನಿದ್ದೆಗೆ ಜಾರುತ್ತಿದ್ದಂತೆ 8 ವರ್ಷದ ಮಗನನ್ನು ಬೇರೆ ಕೋಣೆಯಲ್ಲಿ ಮಲಗಿಸಿ ಪತಿಯ ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರು ನಿಲ್ಲಿಸಿದ್ದಾಳೆ. ಬೆಳಿಗ್ಗೆ ಪತಿ ಹೃದಯಾಘಾತದಿಂದ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತರಾತುರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿದ್ದಾಳೆ. ಆದರೆ ಶವದ ಕತ್ತಿನಲ್ಲಿದ್ದ ಕಲೆ ಕಂಡು ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೊಲೆ ರಹಸ್ಯ ಬಯಲಾಗಿದೆ.


Bottom Add3
Bottom Ad 2

You cannot copy content of this page