*ಬೆಳಗಾವಿಯಲ್ಲಿ ಆಗಸ್ಟ್ 8ರಂದು ಮಹಿಳಾ ರಂಗ ಸಂಗೀತ ವೈಭವ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಸರ್ಕಾರದ ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ ವತಿಯಿಂದ ಆಯೋಜಿಸಲಾಗಿರುವ ಅಭಿನಯ ಸಮೇತ ರಂಗ ಸಂಗೀತ ಮಹಿಳಾ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಆಗಸ್ಟ್ 8 ರಂದು ಸಂಜೆ 6 ಗಂಟೆಗೆ ನಗರದ ಕನ್ನಡ ಭವನದಲ್ಲಿ ಜರುಗಲಿದೆ.
ಬೆಳಗಾವಿ ವಿಭಾಗದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಮಹಿಳಾ ಕಲಾವಿದರಿಗೆ ಕಳೆದ ಹದಿನೈದು ದಿನಗಳಿಂದ ನೀಡಲಾಗಿರುವ ರಂಗಸಂಗೀತ ಹಾಗೂ ಅಭಿನಯ ತರಬೇತಿಯ ಸಮಾರೋಪವಾಗಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ತರಬೇತಿ ಪಡೆದ ಕಲಾವಿದರು ಕಂಪನಿ ನಾಟಕಗಳ ಸೊಗಡನ್ನು ನೆನಪಿಸುವ ಕಂದಪದ್ಯಗಳು, ರಂಗಗೀತೆಗಳು ಹಾಗೂ ಅಭಿನಯ ಸಮೇತ ರಂಗಸಂಗೀತ ಪ್ರದರ್ಶನ ನೀಡಲಿದ್ದಾರೆ.
ಹಿಂದಿನ ವೃತ್ತಿ ರಂಗಭೂಮಿಯ ಮೂಲ ಪರಂಪರೆಯನ್ನು ಉಳಿಸಿಕೊಂಡು ಅದಕ್ಕೆ ಆಧುನಿಕ ರಂಗ ಸಂವೇದನೆಯ ಸ್ಪರ್ಶ ನೀಡುವ ನಿಟ್ಟಿನಲ್ಲಿ ವೃತ್ತಿ ರಂಗಭೂಮಿ ರಂಗಾಯಣ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ದಾವಣಗೆರೆ ಮತ್ತು ಮೈಸೂರು ನಗರಗಳಲ್ಲಿ ಈ ಪ್ರದರ್ಶನ ಯಶಸ್ವಿಯಾಗಿ ನಡೆದಿದ್ದು, ಒಂದು ಕಾಲದಲ್ಲಿ ವೃತ್ತಿ ರಂಗಭೂಮಿಯ ಪ್ರಮುಖ ಕೇಂದ್ರವಾಗಿದ್ದ ಬೆಳಗಾವಿಯಲ್ಲಿಯೂ ಇದೇ ಮಾದರಿಯ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸದ ವಿಷಯವಾಗಿದೆ ಎಂದು ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ತಿಳಿಸಿದರು.
ನಗರದ ವಾರ್ತಾ ಭವನದಲ್ಲಿ ಆಗಸ್ಟ್ 06 (ಗುರುವಾರ) ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮವು ಕಂಪನಿ ನಾಟಕಗಳ ರಂಗಸಂಗೀತ ಪರಂಪರೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಪ್ರಯತ್ನವಾಗಿದ್ದು, ಮಹಿಳಾ ಕಲಾವಿದರ ಪ್ರತಿಭೆ ಅನಾವರಣಗೊಳ್ಳುವ ವಿಶಿಷ್ಟ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಲಿದ್ದು, ಪ್ರಾದೇಶಿಕ ಆಯುಕ್ತ ಕೆ. ಎಂ. ಜಾನಕಿ ಸಮಾರೋಪ ಭಾಷಣ ಮಾಡಲಿದ್ದಾರೆ. ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಂಪನಿ ನಾಟಕಗಳ ರಂಗಸಂಗೀತ ಪರಂಪರೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಆಯೋಜಿಸಿರುವ ಈ ಅಪೂರ್ವ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮಲ್ಲಿಕಾರ್ಜುನ ಕಡಕೋಳ ಮನವಿ ಮಾಡಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಶಿಬಿರದ ನಿರ್ದೇಶಕ ರಾಜಪ್ರಭು ಧೋತ್ರೆ, ರಂಗತಜ್ಞ ಏಣಗಿ ಸುಭಾಷ್ ಹಾಗೂ ಶಿಬಿರದ ಸಂಚಾಲಕ ಎನ್. ನಟರಾಜ್ ಉಪಸ್ಥಿತರಿದ್ದರು.




