ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ರಾಜ್ಯದಲ್ಲಿ ಕಳೆದ ಒಂದು ವಾರದಿಂದ ರಾಜಕೀಯ ಡೊಂಬರಾಟ ನಡೆಯುತ್ತಿದೆ.
ಸರಕಾರ ಕೆಡವಲು ಒಂದಿಷ್ಟು ಜನ ಪ್ರಯತ್ನಿಸುತ್ತಿದ್ದರೆ, ಸರಕಾರ ಉಳಿಸಿಕೊಳ್ಳಲು ಇನ್ನೊಂದಿಷ್ಟು ಜನ ಹೋರಾಟ ನಡೆಸಿದ್ದಾರೆ.
ಇದನ್ನೆಲ್ಲ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ, ವ್ಯಂಗ್ಯ, ವಿಡಂಬನೆಗಳು ಹರಿದಾಡುತ್ತಿವೆ.
ಅಂತಹುದೊಂದು ಸಲಹೆ ಇಲ್ಲಿದೆ:
ಮೂರೂ ಪಕ್ಷದವರು ಸೇರಿಯೇ ಸರ್ಕಾರ ರಚಿಸಿಬಿಡಿ. ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ಕೊಟ್ಟುಬಿಡಿ. ಚಿಂತೆ ಬೇಡ, ಅದಕ್ಕಾಗಿ ಹೊಸದಾಗಿ ಬೇಕಾದಷ್ಟು ಖಾತೆ ಸೃಷ್ಟಿಸಿದರಾಯಿತು. ಇರುವ ಖಾತೆಗಳನ್ನೇ ಹೀಗೆ ವಿಭಜಿಸಿ;
ಕೃಷಿ ಖಾತೆಯನ್ನು ಭತ್ತ ಸಚಿವ, ರಾಗಿ ಸಚಿವ, ಜೋಳ ಸಚಿವ, ಬೇಳೆ ಸಚಿವ, ಕುಂಬಳಕಾಯಿ ಸಚಿವ, ನಿಂಬೆ ಸಚಿವ…. ಹೀಗೆ.
ಕೈಗಾರಿಕೆಯನ್ನು ದೊಡ್ಡ ಕೈಗಾರಿಕೆ, ಸಣ್ಣ ಕೈಗಾರಿಕೆ, ಅತಿ ಸಣ್ಣ ಕೈಗಾರಿಕೆ, ಕಂಡಾಪಟ್ಟೆ ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆ, ಚರ್ಚ್ ಕೈಗಾರಿಕೆ, ಮಸೀದಿ ಕೈಗಾರಿಕೆ….
ಪಶು ಸಂಗೋಪನೆಯನ್ನು ದನ ಸಚಿವ, ಎಮ್ಮೆ ಸಚಿವ, ಕುದುರೆ ಸಚಿವ, ಕೋಳಿ ಸಚಿವ, ಹಂದಿ ಸಚಿವ, ನಾಯಿ ಸಚಿವ….
ಶಿಕ್ಷಣವನ್ನು ಏಳನೇ ಕ್ಲಾಸ್ ಸಚಿವ, ಆರನೇ ಕ್ಲಾಸ್ ಸಚಿವ….. ಮೂರನೇ ಕ್ಲಾಸ್ ಸಚಿವ (ಥರ್ಡ್ ಕ್ಲಾಸ್ ಅಲ್ಲ). ವಿದ್ಯಾರ್ಹತೆಗೆ ಅನುಗುಣವಾಗಿಯೂ ಕೊಡಬಹುದು.
ಆರೋಗ್ಯ ಖಾತೆಯನ್ನು ಕ್ಯಾನ್ಸರ್ ಸಚಿವ, ಮಧುಮೇಹ ಸಚಿವ,ಹುಚ್ಚರ ಸಚಿವ, ಗ್ಯಾಸ್ಟ್ರಿಕ್ ಸಚಿವ…..
ಕ್ರೀಡಾ ಇಲಾಖೆಯಲ್ಲಿ ಕಬಡ್ಡಿ ಸಚಿವ, ಕ್ರಿಕೆಟ್ ಸಚಿವ, ಲಾಂಗ್ ಜಂಪ್ ಸಚಿವ, ಗೋಲಿ ಯಂಡ್ ಚಿನ್ನಿ ದಾಂಡ್ ಸಚಿವ….
ನೀರಾವರಿಯನ್ನು ದೊಡ್ಡ ನೀರಾವರಿ, ಸಣ್ಣ ನೀರಾವರಿ, ಕೊಳಚೆ ನೀರಾವರಿ ಸಚಿವ….
ಹೀಗೆ ಮಾಡಿದಾಗ ಭಿನ್ನಮತ ಎಲ್ಲಿಯದು?
ವಿರೋಧ ಪಕ್ಷವೂ ಇಲ್ಲವಾಗಿ ವಿಧಾನ ಸೌಧದಲ್ಲಿ ಶಾಂತಿಯೂ ನೆಲೆಸಿ ವಾನರ ಸೇನಾ ಸಮೇತ ರಾಮ ರಾಜ್ಯ.
ಏನಂತೀರಿ?
ಸೂಪರ್ ಐಡಿಯಾ ಅಲ್ಲವೆ?
ಆದರೇನು ಮಾಡುವುದು 35ಕ್ಕಿಂತ ಹೆಚ್ಚಿನ ಜನರನ್ನು ಸಚಿವರನ್ನಾಗಿಸಲು ನಮ್ಮ ನ್ಯಾಯಾಲಯ ಅಡ್ಡಿಯಾಗಿದೆಯಲ್ಲ!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ