ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಂಬಂಧ ಕಳೆದ ಕೆಲವು ದಿನಗಳಿಂದ ಸೃಷ್ಟಿಯಾಗಿದ್ದ ಕಾಂಗ್ರೆಸ್ ಗೊಂದಲಕ್ಕೆ ಇದೀಗ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಂಟ್ರಿಯಾಗಿದ್ದು, ಏನು ಮಾಡಬೇಕೆಂದು ನಮಗೆ ಗೊತ್ತಿದೆ, ಸುಮ್ನೆ ಬಾಯಿ ಮುಚ್ಕೊಂಡು ಕೆಲಸ ಮಾಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಬದಲಾಗ್ತಾರೆ, ಕೆಪಿಸಿಸಿ ಅಧ್ಯಕ್ಷರು ಬದಲಾಗ್ತಾರೆ ಎನ್ನುವುದೆಲ್ಲ ಕೇವಲ ಊಹಾಪೋಹ. ಇದರ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ನಾವಿದ್ದೇವೆ. ನೀವು ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ. ಅಭಿವೃದ್ಧಿ ಕೆಲಸಗಳ ಮೂಲಕ ಜನರ ಸೇವೆ ಮಾಡಿ ಎಂದು ಖರ್ಗೆ ಖಡಕ್ ಆಗಿ ಹೇಳಿದರು.
ಪ್ರತಿಯೊಂದು ಹೇಳಿಕೆಗೂ ಹೈಕಮಾಂಡ್ ಸ್ಪಷ್ಟನೆ ಕೊಡಲು ಸಾಧ್ಯವಿಲ್ಲ. ನೀವೇ ಸ್ಟೇಟ್ ಮೆಂಟ್ ಕೊಡೋದು, ಹೈಕಮಾಂಡ್ ಸುಮ್ಮನೆ ಕುಳಿತಿದೆ ಎನ್ನೋದು ಸರಿಯಲ್ಲ. ನೀವೇ ಗೊಂದಲ ಮಾಡಿದವರು, ಎಲ್ಲದಕ್ಕೂ ನಾವು ಉತ್ತರಿಸಲು ಆಗುವುದಿಲ್ಲ. ಸುಮ್ಮನೆ ಸ್ಟೇಟ್ ಮೆಂಟ್ ಕೊಟ್ಟು ಗೊಂದಲ ಸೃಷ್ಟಿಸಬೇಡಿ. ಹೈಕಮಾಂಡ್ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ. ಇದು ನನ್ನ ಸೂಚನೆ. ಹೇಳಿಕೆಗಳನ್ನು ಇಲ್ಲಿಗೆ ನಿಲ್ಲಿಸುತ್ತಾರೆ ಎಂದು ತಿಳಿದುಕೊಂಡಿದ್ದೇನೆ ಎಂದು ಖರ್ಗೆ ಹೇಳಿದರು.
ಹೈಕಮಾಂಡ್ ವೀಕ್ ಅಲ್ಲ, 139 ವರ್ಷದ ಪಕ್ಷ, ಪಕ್ಷವನ್ನು ಎಲ್ಲರೂ ಸೇರಿ ಗಟ್ಟಿ ಮಾಡಬೇಕು. ಎಲ್ಲರೂ ನಡೆದುಕೊಳ್ಳಬೇಕು. ಸರಕಾರದ ಗ್ಯಾರಂಟಿಗಳನ್ನು ಸರಿಯಾಗಿ ಜಾರಿಗೊಳಿಸಬೇಕು. ಅದರಲ್ಲೇ ಹೆಸರು ಬರುತ್ತಿದೆ ಎಂದೂ ಅವರು ಹೇಳಿದರು.
ಇದೇ ವೇಳೆ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ನನ್ನ ಕೆಲಸ, ಸಾಮರ್ಥ್ಯ ನೋಡಿ ನನಗೆ ಹುದ್ದೆ ಕೊಟ್ಟಿರುವುದು. ನಾನು ಕೇಳಿ ಪಡೆದಿರುವುದಲ್ಲ ಎಂದು ಹೇಳಿದರು.
ಒಟ್ಟಾರೆ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಕಾಂಗ್ರೆಸ್ ಗೊಂದಲಕ್ಕೆ ಇಲ್ಲಿಗೆ ತೆರೆ ಬೀಳುವುದೋ ಅಥವಾ ಬೇರೆ ತಿರುವು ಪಡೆಯಲಿದೆಯೋ ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ