*ಬೆಳಗಾವಿ ಅಧಿವೇಶನ: ವಿಶ್ವದ ಮೊದಲ ಸಂಸತ್ತು ಹೆಗ್ಗಳಿಕೆಯ “ಅನುಭವ ಮಂಟಪದ” ಬೃಹತ್ ತೈಲವರ್ಣ ಚಿತ್ರ ಅನಾವರಣ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಚಳಿಗಾಲದ ಅಧಿವೇಶನದ ಮೊದಲ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ” ಕಾರ್ಯಕ್ರಮದ ಮಹಾತ್ಮಗಾಂಧಿ ಅವರ ಲೋಗೋ ಅನಾವರಣ ಗೊಳಿಸಿದರು.
ಬಳಿಕ ಸುವರ್ಣಸೌಧದ ಮೊದಲ ಮಹಡಿಯಲ್ಲಿ ಅನುಭವ ಮಂಟಪದ ತೈಲ ಕಲಾಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ಸಭಾಧ್ಯಕ್ಷರ ಕೊಠಡಿಯಲ್ಲಿ ಅನುಭವ ಮಂಟಪ ತೈಲ ಕಲಾಕೃತಿಯ ಕಲಾವಿದರನ್ನು ಸನ್ಮಾನಿಸಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಶ್ವದ ಮೊದಲ ಸಂಸತ್ತು ಹೆಗ್ಗಳಿಕೆಯ ಅನುಭವ ಮಂಟಪದ ಬೃಹತ್ ತೈಲವರ್ಣ ಚಿತ್ರ ಅನಾವರಣ ನಿಜಕ್ಕೂ ಐತಿಹಾಸಿಕ ದಾಖಲೆಯಾಗಿದೆ. ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ, “ವಿಶ್ವದ ಮೊದಲ ಸಂಸತ್ತು” ಎಂಬ ಖ್ಯಾತಿಯ, “ಅನುಭವ ಮಂಟಪದ” ಬೃಹತ್ ತೈಲವರ್ಣ ಚಿತ್ರ ಅನಾವರಣವು ಯು. ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ, ಚಳಿಗಾಲ ಅಧಿವೇಶನದ ಮೊದಲ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದ್ದಾರೆ.
ಇದು ಕೇವಲ ಒಂದು ತೈಲವರ್ಣ ಚಿತ್ರ ಅನಾವರಣ ಕಾರ್ಯಕ್ರಮವಲ್ಲ, ಬದಲಾಗಿ ನಮ್ಮ ಪ್ರಜಾಪ್ರಭುತ್ವದ ಮೂಲ ಆಶಯಗಳು, ಸಮಾನತೆ, ಮಾನವೀಯ ಸಂದೇಶಗಳನ್ನು ಜಗತ್ತಿಗೆ ಮತ್ತೊಮ್ಮೆ ಪರಿಚಯಿಸುವ ಹಾಗೂ ಮಹಾತ್ಮಾ ಗಾಂಧೀಜಿಯವರು ಅಧಿವೇಶನದಲ್ಲಿ ಪಾಲ್ಗೊಂಡ ಶತಮಾನೋತ್ಸವದ, ಸ್ಮರಣಾರ್ಥವಾಗಿ ನಡೆದ ಒಂದು ಮಹತ್ವದ ಐತಿಹಾಸಿಕ ಕ್ಷಣವಾಗಿದೆ. ಕ್ಯಾನ್ವಾಸ್ ಮೇಲೆ ತೈಲ ಮಾಧ್ಯಮದ ಮೂಲಕ ರಚಿಸಲ್ಪಟ್ಟ 20 ಅಡಿ ಉದ್ದ ಮತ್ತು 10 ಅಡಿ ಅಗಲದ ಈ ವಿಶೇಷ ಚಿತ್ರಕ್ಕೆ ಜೀವಂತಿಗೆ ಮತ್ತು ನೈಜತೆ ತುಂಬಿದವರು, ಬಿ.ಎಲ್. ಶಂಕರ್ ನೇತೃತ್ವದಲ್ಲಿ, ಪ್ರಖ್ಯಾತ ಕಲಾವಿದರಾದ – ಬೆಂಗಳೂರು ಚಿತ್ರಕಲಾ ಪರಿಷತ್ ನ ಸತೀಶ್ ರಾವ್ ಶಿವಮೊಗ್ಗ, ಶ್ರೀಕಾಂತ್ ಹೆಗಡೆ ಸಿದ್ದಾಪುರ, ಶೇಷಾದ್ರಿಪುರಂ ಕೆನ್ ಸ್ಕೂಲ್ ಕಲಾಶಾಲೆಯ ಅಶೋಕ್ ಯು, ಜಗಳೂರು ರಾಜಾ ರವಿವರ್ಮ ಕಲಾಶಾಲೆಯ ರೂಪಾ ಎಂ.ಆರ್, ವೀರಣ್ಣ ಮಡಿವಾಳಪ್ಪ ಬಬ್ಲಿ, ಬೈಲಹೊಂಗಲ ಮತ್ತು ಮಹೇಶ ನಿಂಗಪ್ಪ, ದಫಲಾಪುರ, ಜಮಖಂಡಿ ಅವರು.
ಮೊದಲ ಸಭಾಧ್ಯಕ್ಷರಾದ ಶ್ರೀ ಅಲ್ಲಮಪ್ರಭು ಅವರ ಮುಂದಾಳುತ್ವದಲ್ಲಿ ಅಜರಾಮರ ಚಿಂತನೆಗಳನ್ನು ಮತ್ತು ಅನನ್ಯ ತತ್ತ್ವಜ್ಞಾನವನ್ನು ಪ್ರತಿಬಿಂಬಿಸಿದ ಈ ಪವಿತ್ರ ವೇದಿಕೆಯು, ಕೇವಲ ಶರಣ ಚಿಂತನೆಗಳ ಕೇಂದ್ರವಾಗಿರದೆ, ಸಮಸ್ತ ಮನುಕುಲದ ಏಳಿಗೆಗೆ ಶಾಶ್ವತ ಆದರ್ಶಗಳನ್ನು ನೀಡಿ, ಮಾನವೀಯತೆ ಮತ್ತು ಸಮಾನತೆಯ ಮಹಾನ್ ಸಂದೇಶವನ್ನು ಸಮಸ್ತ ವಿಶ್ವಕ್ಕೆ ತೋರಿಸಿಕೊಟ್ಟ ಶಕ್ತಿ ಕೇಂದ್ರವಾಗಿತ್ತು. ಇದು ಸರ್ವಜಾತಿ, ಧರ್ಮಗಳ ಶರಣರನ್ನು ಸ್ವೀಕರಿಸಿದ ಪವಿತ್ರ ತಾಣವಾಗಿದ್ದು, ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಸಿದ್ದರಾಮೇಶ್ವರ, ಮಡಿವಾಳ ಮಾಚಿದೇವ, ದೋಹರ ಕಕ್ಕಯ್ಯ, ಮೇದಾರ ಕೇತಯ್ಯ, ಬಹುರೂಪಿ ಚೌಡಯ್ಯ, , ಕೇತಲದೇವಿ, ದುಗ್ಗಳೆ, ಕಾಳವ್ವ ಮೊದಲಾದ ಶರಣರ ದಿವ್ಯ ಚಿಂತನೆಯನ್ನು ಮತ್ತು ಅನುಭವಗಳನ್ನು ಜಗತ್ತಿಗೆ ಪರಿಚಯಿಸಿದ ಪುಣ್ಯ ಸ್ಥಳವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ