ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಹುದಿನಗಳ ನಂತರ ಪೂರ್ವನಿಗದಿಯಂತೆ ೨೦೧೯-೨೦ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಗುರುವಾರದಿಂದ ಜರುಗಲಿವೆ. ಕೊರೋನಾ ಮಹಾಮಾರಿಯಿಂದ ವಿದ್ಯಾರ್ಥಿಗಳು ತಲ್ಲಣಗೊಂಡಿದ್ದು ಸಹಜ. ಆದರೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವಾರು ಅಗತ್ಯಕ್ರಮಗಳನ್ನು ಕೈಗೊಂಡಿದೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಹೆದರುವ, ಆತಂಕ ಪಡುವ ಅಗತ್ಯವಿಲ್ಲ. ಧೈರ್ಯದಿಂದ ಪರೀಕ್ಷೆಯನ್ನು ಬರೆಯಿರಿ ಎಂದು ರಾಜ್ಯಸಭಾ ಸದಸ್ಯ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಹಲವಾರು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಇದು ಜೀವನದ ಮೊದಲ ಬೋರ್ಡ್ ಪರೀಕ್ಷೆ. ನಾನು ಫೇಲಾಗುತ್ತೇನೆಂಬ ಕೀಳರಿಮೆ ಬೇಡವೇ ಬೇಡ. ಅವುಗಳಿಗೆ ಎದೆಗುಂದದೆ ಬರುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವಂತೆ ಮನಸ್ಸನ್ನು ಸದೃಢಗೊಳಿಸಿಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳು ಯಾವುದೇ ಒತ್ತಡವನ್ನು ಹೊಂದದೆ, ಭಯ ತಲ್ಲಣಗಳನ್ನು ಬಿಟ್ಟು ಪರೀಕ್ಷೆಯನ್ನು ಎದುರಿಸಿ.
ನಿಮ್ಮ ಗೆಳೆಯರೊಂದಿಗೆ ಸಾಮಾಜಿಕ ಅಗತ್ಯ ಅಂತರವಿರಲಿ, ಕೈ ಕುಲಕಬೇಡಿ, ಅಪ್ಪಿಕೊಳ್ಳಬೇಡಿ. ಎಲ್ಲ ದುಗುಡಗಳನ್ನು ಬಿಡಿ. ಸಂತೋಷದಿಂದ ಆತ್ಮವಿಶ್ವಾಸದಿಂದ ಪ್ರಶ್ನೆಪತ್ರಿಕೆಯನ್ನು ಬಿಡಿಸಿ. ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ’ಬೆಸ್ಟ್ ಆಫ್ ಲಕ್’ ಎಂದ ಡಾ.ಪ್ರಭಾಕರ ಕೋರೆಯವರು ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.
ಕೆಎಲ್‌ಇ ಸಂಸ್ಥೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಕುರಿತು ಮನವರಿಕೆ ಮಾಡಿಕೊಟ್ಟಿದೆ. ಸಾಮಾಜಿಕ ಅಂತರದಲ್ಲಿ ಪರೀಕ್ಷೆಯನ್ನು ಬರೆಯುವ ಪ್ರಾಯೋಗಿಕ ತರಬೇತಿಯನ್ನು ಆನ್‌ಲೈನ್ ಮೂಲಕ ನೀಡಿ ಧೈರ್ಯವನ್ನು ತುಂಬಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ