ಪ್ರಗತಿವಾಹಿನಿ ಸುದ್ದಿ: ಯಾದಗಿರಿ ಸೈಬರ್ ಕ್ರೈಂ ಠಾಣೆ ಪಿಎಸ್ಐ ಪರಶುರಾಮ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಕಳೆದುಕೊಂಡು ಆಘಾತಕ್ಕೊಳಗಾಗಿರುವ ಪತ್ನಿ ಶ್ವೇತಾ ಶವಾಗಾರದ ಮುಂದೆಯೇ ಕುಸಿದು ಬಿದ್ದ ಘಟನೆ ನಡೆದಿದೆ.
ಮೃತ ಪಿಎಸ್ಐ ಪರಶುರಾಮ್ ಪತ್ನಿ ಶ್ವೇತಾ ತುಂಬು ಗರ್ಭಿಣಿಯಾಗಿದ್ದು, ಪತಿ ಸಾವಿಗೆ ನ್ಯಾಯಕೊಡಿಸುವಂತೆ ಒಂದೆಡೆ ಹೋರಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ಪತಿ ಕಳೆದುಕೊಂಡು ಆಘಾತದಲ್ಲಿರುವ ಶ್ವೇತಾ, ಶವಾಗಾರದ ಮುಂದೆ ಶ್ವೇತಾ ಏಕಾಏಕಿ ಕುಸಿದು ಬಿದ್ದಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಿಎಸ್ಐ ಪರಶುರಾಮ್ ಸಾವಿಗೆ ಶಾಸಕ ಚೆನ್ನಾರೆಡ್ಡಿ ಹಾಗೂ ಪುತ್ರ ಪಂಪನಗೌಡ ಕಾರಣ ಎಂದು ಆರೋಪಿಸಿ ಪರಶುರಾಮ್ ಪತ್ನಿ ಶ್ವೇತಾ ಹಾಗೂ ಕುಟುಂಬದವರು ದೂರು ನೀಡಿದ್ದು, ಯಾದಗಿರಿ ಠಾಣೆಯಲ್ಲಿ ಶಾಸಕ ಹಾಗೂ ಪುತ್ರನ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಪೋಸ್ಟಿಂಗ್ ಗಾಗಿ ಹಣಕ್ಕೆ ಬೇಡಿಕೆ ಹಾಗೂ ಕಿರುಕುಳ ನೀಡಿದ ಕಾರಣದಿಂದಲೇ ಪರಶುರಾಮ್ ಒತ್ತಡಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಪಿಎಸ್ಐ ಸಾವಿಗೆ ಶಾಸಕರು ಹಾಗೂ ಅವರ ಪುತ್ರನೇ ಕಾರಣ ಎಂದು ಶ್ವೇತಾ ದೂರಿದ್ದಾರೆ. ಪರಶುರಾಮ್ ಪತ್ನಿ ಶ್ವೇತಾ ನೀಡಿದ ದೂರಿನ ಮೇರೆಗೆ ಯಾದಗಿರಿ ನಗರ ಠಾಣೆಯಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಪುತ್ರ ಪಂಪನಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇನ್ನೊಂದೆಡೆ ವಿವಿಧ ಸಂಘಟನೆಗಳು ಯಾದಗಿರಿ ನಗರದಲ್ಲಿ ಪ್ರತಿಭಟನೆ ನಡೆಸಿದ್ದು, ಪರಶುರಾಮ್ ಸಾವಿನ ಹಿಂದೆ ಶಾಸಕರು ಮಾತ್ರವಲ್ಲ, ಹಿರಿಯ ಪೊಲೀಸ್ ಅಧಿಕಾರಿಗಳ ಕೈವಾಡವೂ ಇದೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ