Kannada NewsKarnataka NewsLatest

ಕೊನೆಗೂ ಕೈಗೂಡಲಿಲ್ಲ ಬೆಳಗಾವಿ ಬಿಜೆಪಿ ನಾಯಕರ ಪ್ರಯತ್ನ -updated

ಕೊನೆಗೂ ಕೈಗೂಡಲಿಲ್ಲ ಬೆಳಗಾವಿ ಬಿಜೆಪಿ ನಾಯಕರ ಪ್ರಯತ್ನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ವೈಮಾನಿಕ ಸಮೀಕ್ಷೆ ನಡೆಸಿದರು.

ಬೆಂಗಳೂರಿನಿಂದ ವಿಶಏಷ ವಿಮಾನದಲ್ಲಿ ಹೊರಟ ಯಡಿಯೂರಪ್ಪ ತೋರಣಗಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ರಾಯಚೂರು, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು.

ನಂತರ ವಿಜಯಪುರದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಆದೇಶಿಸಿದರು. ಪ್ರವಾಹ ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ. ಶೀಘ್ರವೇ ಈ ಭಾಗದ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸುತ್ತೇನೆ ಎಂದು ಅವರು ತಿಳಿಸಿದರು.

ಕಾದಿದ್ದ ಬಿಜೆಪಿ ನಾಯಕರು

ಹವಾಮಾನ ವೈಪರೀತ್ಯದಿಂದಾಗಿ ಯಡಿಯೂರಪ್ಪ ಅವರ ಬೆಳಗಾವಿ ಜಿಲ್ಲೆಯ ಕಾರ್ಯಕ್ರಮವನ್ನು ರದ್ಧುಪಡಿಸಲಾಯಿತು. ನಿನ್ನೆ ಇದೇ ಕಾರಣ ನೀಡಿ ಅವರ ಮೊದಲ ಪ್ರವಾಸ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಹೆಸರಿರಲಿಲ್ಲ.

ಆದರೆ ರಾತ್ರಿ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮತ್ತು ಮಾಜಿ ಸಚಿವ ಲಕ್ಷ್ಮಣ ಸವದಿ ಯಡಿಯೂರಪ್ಪ ಮನೆಗೆ ತೆರಳಿ ಮನವೊಲಿಸಿದ್ದರು. ಅಥಣಿಗೆ ಹೆಲಿಕಾಪ್ಟರ್ ಮೂಲಕ ಬಂದು, ಅಲ್ಲಿಂದ ರಸ್ತೆ ಮೂಲಕ ನಂದೇಶ್ವರ ಮತ್ತು ಸತ್ತಿಗೆ ತೆರಳಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಮುಖ್ಯಮಂತ್ರಿ ಒಪ್ಪಿದ್ದರು. ನಂತರ ಅಥಣಿ ಭೇಟಿ ಸೇರಿಸಿ ಹೊಸದಾಗಿ ಪ್ರವಾಸ ಪಟ್ಟಿ ತಯಾರಿಸಲಾಗಿತ್ತು. ಲಕ್ಷ್ಮಣ ಸವದಿ ಕೂಡ ಮುಖ್ಯಮಂತ್ರಿ ಜೊತೆಗೇ ಬೆಂಗಳೂರಿನಿಂದ ಹೊರಟಿದ್ದರು.

ಅದರಂತೆ ಜಿಲ್ಲೆಯ ಬಿಜೆಪಿ ನಾಯಕರಾದ ಮಹಾಂತೇಶ ಕವಟಗಿಮಠ, ಶಶಿಕಲಾ ಜೊಲ್ಲೆ, ಉಮೇಶ ಕತ್ತಿ, ಪಿ.ರಾಜೀವ, ದುರ್ಯೋಧನ ಐಹೊಳೆ, ರಾಜು ಕಾಗೆ ಮೊದಲಾದವರು ಅಥಣಿಯಲ್ಲಿ ಕಾದು ಕುಳಿತಿದ್ದರು. ಹಾಗೆಯೇ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ ಸಿಂಗ್, ಜಿಲ್ಲಾಧಿಕಾರಿ ಎಸ್,ಬಿ,ಬೊಮ್ಮನಳ್ಳಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ವಿ.ರಾಜೇಂದ್ರ, ಎಸ್ಪಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಹ ಕಾಯುತ್ತಿದ್ದರು.

ಆದರೆ ಹವಾಮಾನ ವೈಪರೀತ್ಯದಿಂದಾಗಿ ಕೊನೆಯ ಕ್ಷಣದಲ್ಲಿ ಅಥಣಿ ಭೇಟಿಯನ್ನು ರದ್ಧುಪಡಿಸಿ ವಾಪಸ್ ತೆರಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button