*ಬ್ಯಾಂಕಿಂಗ್ ಕ್ಷೇತ್ರಕ್ಕೆ ವಿಶ್ವಾಸವೇ ಮುಖ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
ಯರಗಟ್ಟಿ ಯಲ್ಲಿ ಲಕ್ಷ್ಮೀ ತಾಯಿ ಸೌಹಾರ್ದ ಸಹಕಾರಿ ಸಂಘದ 9ನೇ ಶಾಖೆ ಉದ್ಘಾಟನೆ
ಪ್ರಗತಿವಾಹಿನಿ ಸುದ್ದಿ: ಬ್ಯಾಂಕಿಂಗ್ ಕ್ಷೇತ್ರ ವಿಶ್ವಾಸದ ಮೇಲೆ ನಿಂತುಕೊಂಡಿದೆ. ವಿಶ್ವಾಸವಿದ್ದರೆ ಮಾತ್ರ ಹಣಕಾಸು ಸಂಸ್ಥೆಗಳು ಬೆಳೆಯಲು ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಲಕ್ಷ್ಮೀ ತಾಯಿ ಸೌಹಾರ್ದ ಸಹಕಾರಿ ಸಂಘದ ಗೌರವ ಅಧ್ಯಕ್ಷರೂ ಆದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಯರಗಟ್ಟಿಯಲ್ಲಿ ಲಕ್ಷ್ಮೀ ತಾಯಿ ಕೋಪರೇಟಿವ್ ಸೌಹಾರ್ದ ಸಹಕಾರಿ ಸಂಘದ 9ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಇಂದಿನ ಸಂದರ್ಭಗಳಲ್ಲಿ ಅನೇಕ ಕಡೆ ವಿಶ್ವಾಸ ಕಳೆದುಕೊಳ್ಳುವಂಥ ಘಟನೆಗಳು ನಡೆದಿವೆ. ಒಮ್ಮೆ ವಿಶ್ವಾಸ ಕಳೆದುಕೊಂಡಲ್ಲಿ ಆಂಥ ಸಂಸ್ಥೆಗಳು ಬೆಳೆಯಲು ಸಾಧ್ಯವಿಲ್ಲ ಎಂದರು.
ಯರಗಟ್ಟಿ ಭಾಗದ ರೈತರ, ವ್ಯಾಪಾರಸ್ಥರ, ಎಲ್ಲರ ಭವಿಷ್ಯದ ದೃಷ್ಟಿಯಿಂದ, ಎಲ್ಲರ ವಿಶ್ವಾಸದೊಂದಿಗೆ ಈ ಶಾಖೆಯನ್ನು ಆರಂಭಿಸಲಾಗಿದೆ. ಬ್ಯಾಂಕ್ ಅನ್ನು ಹೆಮ್ಮರವಾಗಿ ಬೆಳೆಸುವ ಉದ್ದೇಶ ಹೊಂದಿದ್ದೇವೆ. ಸಂಸ್ಥೆಯಲ್ಲಿ ರಾಜಕಾರಣ ತರದೆ ಉತ್ತಮ ಸೇವೆಯೊಂದಿಗೆ ಸಂಸ್ಥೆಯನ್ನು ಮುನ್ನಡೆಸಲಾಗುವುದು, ಅತ್ಯಂತ ಶಿಸ್ತಿನಿಂದ ಸಂಸ್ಥೆಯನ್ನು ನಡೆಸಲಾಗುತ್ತಿದೆ. ಎಲ್ಲರ ಹಣ ಸುರಕ್ಷಿತವಾಗಿರುತ್ತದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲೂ ಹೆಚ್ಚಿನ ಕೆಲಸ ಮಾಡುವ ಅಪೇಕ್ಷೆಯಿದ್ದು, ಜನರ ಮಧ್ಯದಲ್ಲಿಯೇ ಇರಲು ನನಗೆ ಹೆಚ್ಚು ಇಷ್ಟ ಎಂದು ಹೇಳಿದರು.
ಹಿರಿಯ ಸಹಕಾರಿ ಧುರೀಣ ರವೀಂದ್ರ ಯಲಿಗಾರ್ ಮಾತನಾಡಿ, ಸಹಕಾರಿ ರಂಗದಲ್ಲಿ ರಾಜಕೀಯ ತರಬಾರದು. ರಾಜಕೀಯ ಬಂದರೆ ಸಂಸ್ಥೆ ದಾರಿ ತಪ್ಪು ತ್ತದೆ. ಲಕ್ಷ್ಮೀ ತಾಯಿ ಕೋಪರೇಟಿವ್ ಸೌಹಾರ್ದ ಸಹಕಾರಿ ಸಂಘ ಯಾವುದೇ ರಾಜಕೀಯ ಇಲ್ಲದೆ, ಜನರ ವಿಶ್ವಾಸ ಗಳಿಸಿರುವುದೇ ಸಂಸ್ಥೆ ಬೆಳೆಯಲು ಕಾರಣ ಎಂದರು.
ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ 10 ವರ್ಷಗಳಿಗಿಂತ ಹೆಚ್ಚು ಸಮಯದಿಂದ ಸವದತ್ತಿ ಭಾಗದಲ್ಲಿ ಸಂಪರ್ಕವಿದ್ದು, ಹರ್ಷ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಮೂಲಕ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕಾರ್ಖಾನೆ ಮೇಲೆ ಜನರ ವಿಶ್ವಾಸ ಹೆಚ್ಚುತ್ತಿದ್ದು, ಕಬ್ಬು ಪೂರೈಕೆದಾರರ ಸಂಖ್ಯೆ ಬೆಳೆಯುತ್ತಿದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಮಾತನಾಡಿ, ನಂಬಿಕೆಗೆ ಇನ್ನೊಂದು ಹೆಸರಾಗಿರುವ ಲಕ್ಷ್ಮೀ ಹೆಬ್ಬಾಳಕರ್ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯನ್ನು ಸ್ಥಾಪಿಸಿ ಮುನ್ನ ನಡೆಸಲಾಗುತ್ತಿದೆ. ರೈತರ ಸಂಬಂಧ ಬೆಳೆದಂತೆ ಶಾಖೆಗಳು ಕೂಡ ಹೆಚ್ಚುತ್ತಿವೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ದೊರೆಯುವ ಎಲ್ಲ ಸೌಲಭ್ಯಗಳನ್ನು ನಮ್ಮ ಸಂಸ್ಥೆಯಲ್ಲಿ ನೀಡಲಾಗುತ್ತಿದೆ. ಕಳೆದ ಮೂರು ವರ್ಷವೂ ಲಾಭದಲ್ಲಿದ್ದು, ಸಂಸ್ಥೆಯನ್ನು ಉತ್ತಮವಾಗಿ ನಡೆಸುತ್ತಿದ್ದೇವೆ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಮಹಾಂತೇಶ್ ಮತ್ತಿಕೊಪ್ಪ ಮಾತನಾಡಿ, ಆರು ಕೋಟಿ ರೂಪಾಯಿ ಬಂಡವಾಳದಿಂದ ಆರಂಭವಾದ ಸಂಸ್ಥೆ ಇಂದು 45 ಕೋಟಿ ರೂಪಾಯಿವರೆಗೂ ತಲುಪಿದೆ. ಸದಸ್ಯರ ಸಂಖ್ಯೆ 1400 ರಿಂದ 15000ಕ್ಕೇರಿದೆ. ದಿನದಿಂದ ದಿನಕ್ಕೆ ವಿಶ್ವಾಸಾರ್ಹವಾಗಿ ಸಂಸ್ಥೆ ಬೆಳೆಯುತ್ತಿದೆ ಎಂದು ತಿಳಿಸಿದರು.
ಈ ವೇಳೆ ಶಾಸಕ ವಿಶ್ವಾಸ್ ವೈದ್ಯ, ಸ್ಥಳೀಯ ಮುಖಂಡರಾದ ಟಿ.ಕೆ.ಪಾಟೀಲ್, ವಿಠಲ ದೇವರಡ್ಡಿ, ಸಂಸ್ಥೆಯ ಸಿಇಒ ಸಾಗರ ಇಂಗಳಗಿ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ