*ಲಾಸ್ ಏಂಜಲೀಸ್‌ನಲ್ಲಿ ಯಶ್ ಕ್ರೇಜ್*: *ರಣಬೀರ್, ಸಾಯಿ ಪಲ್ಲವಿ ವೇದಿಕೆಯಲ್ಲಿದ್ದರೂ ಮೊಳಗಿದ್ದು ರಾವಣನ ಹೆಸರು!*

ಪ್ರಗತಿವಾಹಿನಿ ಸುದ್ದಿ: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ’ದ ವಿಶೇಷ ಪ್ರೀಮಿಯರ್ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಅಕ್ಟೋಬರ್ 27ರಂದು ಅದ್ದೂರಿಯಾಗಿ ನಡೆಯಿತು. ಚಿತ್ರಮಂದಿರ ಪ್ರೇಕ್ಷಕರಿಂದ ತುಂಬಿತ್ತು. ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಸೇರಿದಂತೆ ನಟರಾದ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದಿದ್ದು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಯಶ್.
ರಾಮನ ಪಾತ್ರಧಾರಿ ರಣಬೀರ್ ಕಪೂರ್ ಮತ್ತು ಸೀತೆಯ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ ವೇದಿಕೆಯಲ್ಲಿದ್ದರೂ, ಅಭಿಮಾನಿಗಳು ಯಶ್ ಹೆಸರನ್ನು ಕೂಗಿ ಸಂಭ್ರಮಿಸಿದರು. ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿದ ಯಶ್ ವೇದಿಕೆಗೆ ಬಂದಾಗ ಅಭಿಮಾನಿಗಳು ‘ಯಶ್’, ‘ರಾವಣ’ ಎಂದು ಘೋಷಣೆ ಕೂಗಿದರು. ಈ ಮೂಲಕ ಅಂತರರಾಷ್ಟ್ರೀಯ ವೇದಿಕೆಯಲ್ಲೂ ಯಶ್ ಕ್ರೇಜ್ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ಮೊದಲು ಕನ್ನಡದಲ್ಲೇ “ಎಲ್ಲರಿಗೂ ನಮಸ್ಕಾರ” ಎಂದು ಮಾತು ಆರಂಭಿಸಿದರು. ಬಳಿಕ ಇಂಗ್ಲಿಷ್‌ನಲ್ಲಿ ಮಾತನಾಡಿದ ಅವರು, ನಾವು ಬಂದ ನೆಲವನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು. ಕನ್ನಡ ಚಿತ್ರರಂಗ ಮತ್ತು ಭಾರತೀಯ ಚಿತ್ರರಂಗದ ಭಾಗವಾಗಿರುವುದಕ್ಕೆ ಹೆಮ್ಮೆ ಇದೆ ಎಂದು ತಮ್ಮ ಸಂತಸ ವ್ಯಕ್ತಪಡಿಸಿದರು.
‘ರಾಮಾಯಣ’ ಸಿನಿಮಾ ನವೆಂಬರ್ 5ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಸಿ ಡಬ್ಬಿಂಗ್ ಮಾಡಲಾಗಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಈ ತಪ್ಪು ತಿಳಿವಳಿಕೆಯಿಂದ ಕೆಲವು ಇಂಗ್ಲಿಷ್ ವಿಮರ್ಶಕರು ವಿಶೇಷ ಪ್ರದರ್ಶನಕ್ಕೆ ಬಂದಿಲ್ಲ ಎಂಬ ವದಂತಿಯೂ ಹರಿದಾಡಿದೆ. ಆದರೆ ಈ ಸುದ್ದಿ ಸುಳ್ಳು ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


