
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಕೆಲ ದಿನಗಳಿಂದ ತಣ್ಣಗಾಗಿರುವ ಬೆನ್ನಲ್ಲೇ ಸಿಎಂ ಪುತ್ರ, ಎಂ ಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ, ನಮ್ಮ ತಂದೆ ೫ ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಐದು ವರ್ಷಗಳ ಪೂರ್ಣಾವಧಿ ಮುಗಿಸುತ್ತಾರೆ ಎಂದು ಹೇಳಿದರು.
ಸದ್ಯಕ್ಕೆ ಯಾವುದೇ ಬದಲಾವಣೆಯೂ ಇಲ್ಲ. ನಾಯಕತ್ವ ಬದಲಾವಣೆ ಕುರಿತು ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದ್ದು, ರಾಜಕೀಯ ವಲಯದಲ್ಲಿ ಈ ಬಗ್ಗೆ ಗೊಂದಲವಿಲ್ಲ. ಹೈಕಮಾಂಡ್ ಕಡೆಯಿಂದ ಸ್ಪಷ್ಟ ಸೂಚನೆ ಲಭಿಸಿದೆ. ಯಾವುದೇ ನಾಯಕತ್ವ ಬದಲಾವಣೆ ಇಲ್ಲ. ನಮ್ಮ ತಂದೆ ೫ ವರ್ಷ ಸಿಎಂ ಆಗಿ ಪೂರ್ಣಾವಧಿ ಮುಗಿಸುತ್ತಾರೆ. ಈ ಬಗ್ಗೆ ಹೈಕಮಾಂಡ್ ಅವರಿಗೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ತಿಳಿಸಿದ್ದಾರೆ.



