*ಸಮಯ ಪ್ರಜ್ಞೆ ಇಲ್ವಾ ಎಂದು ಗರಂ ಆದ ಶಾಸಕ: ಮನೆಯಲ್ಲಿ ಅಮ್ಮ ಇರ್ಲಿಲ್ಲ ಹಾಗಾಗಿ ಬರೋದು ತಡವಾಯ್ತು ಎಂದ ಸಚಿವ ಯತೀಂದ್ರ*

ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಹಿನ್ನೆಲೆ ಆಯೋಜಿಸಲಾಗಿದ್ದ ದಸರಾ ಗಜಪಡೆ ಮಾವುತರು, ಕಾವಾಡಿಗಳಿಗೆ ಉಪಾಹಾರ ಮತ್ತು ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ತಡವಾಗಿ ಬಂದ ಘಟನೆ ನಡೆದಿದೆ. ಇದಕ್ಕೆ ಶಾಸಕ ತನ್ವೀರ್ ಸೇಠ್ ಗರಂ ಆದರು.
ಬೆಳಗ್ಗೆ 9 ಗಂಟೆಗೆ ನಿಗದಿಯಾಗಿದ್ದ ಉಪಹಾರ ಕಾರ್ಯಕ್ರಮಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ಒಂದು ಗಂಟೆ ತಡವಾಗಿ ಅಂದರೆ 10 ಗಂಟೆಗೆ ಆಗಮಿಸಿದರು. ಇದರಿಂದ ಮಾವುತರು ಮತ್ತು ಕಾವಾಡಿಗರು ಒಂದು ಗಂಟೆ ಕಾಲ ಸಚಿವರಿಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ಸಚಿವರ ಈ ನಡೆಗೆ ಶಾಸಕ ತನ್ವೀರ್ ಸೇಠ್ ಗರಂ ಆಗಿದ್ದಾರೆ.
ಜಿಲ್ಲಾಧಿಕಾರಿಗೆ ಕರೆಮಾಡಿ ಟೈಂ ಸೆನ್ಸ್ ಇಲ್ವೇನ್ರೀ, ಸಮಯ ಪ್ರಜ್ಞೆನೇ ಇಲ್ಲಾ ಅಂದ್ರೆ ಏನ್ಮಾಡಬೇಕು? ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ಎಂದು ಸಚಿವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಾವುತರು ಕಾಡಿನ ಜನರು, ಅವರಿಗೆ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಆಗಬೇಕು. ಹಾಗಾಗಿ ಬೆಳಿಗ್ಗೆಯೆ ಉಪಹಾರ ಕೂಟ ಆಯೋಜಿಸಿದ್ದು ಎಂದು ಶಾಸಕರು ಪ್ರತಿಪಾದಿಸಿದರು. ಕಾದು ಕಾದು ಬೇಸತ್ತ ತನ್ವೀರ್ ಸೇಠ್ ಉಪಹಾರ ಕೂಟ ಸ್ಥಳದಿಂದ ತೆರಳಿದರು. ನಂತರ 10 ಗಂಟೆಗೆ ಯತೀಂದ್ರ ಸಿದ್ದರಾಮಯ್ಯ ಸ್ಥಳಕ್ಕೆ ಆಗಮಿಸಿದರು. ಮಾಜಿ ಸಚಿವ ಜಿ.ಟಿ. ದೇವೇಗೌಡರೊಂದಿಗೆ ಉಪಹಾರ ಕೂಟದಲ್ಲಿ ಪಾಲ್ಗೊಂಡರು.
ತಡವಾಗಿ ಬಂದಿದ್ದಕ್ಕೆ ಸಮಜಾಯಿಷಿ ನೀಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ನಮ್ಮದು ಹೊಸ ಮನೆ, ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಮನೆಯಲ್ಲಿ ಅಮ್ಮ ಇರಲಿಲ್ಲ, ಕೆಲಸಗಾರರೂ ಇರಲಿಲ್ಲ. ಹೀಗಾಗಿ ಕೆಲವೊಂದಿಷ್ಟು ವ್ಯವಸ್ಥೆ ಮಾಡಿ ಬರುವುದರಲ್ಲಿ ತಡವಾಯಿತು. ಉದ್ದೇಶಪೂರ್ವಕವಾಗಿ ತಡಮಾಡಿ ಬಂದಿಲ್ಲ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




