*ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಯತ್ನಾಳ್ ಟಾಕ್ ವಾರ್*
ಪ್ರಗತಿವಾಹಿನಿ ಸುದ್ದಿ: ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿಸಲು ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ಹಲವು ಬಾರಿ ದೆಹಲಿಗೆ ಹೋಗಿ ಬಂದರೂ, ಅವರ ಕೈಗೆ ಸಿಕ್ಕಿದ್ದೂ ಕೇವಲ ಚೆಂಡು ಮಾತ್ರ ಎಂದು ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಮಾಜಿ ಸಿಎಂ ಬಿಎಸ್‌ವೈ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ವಕೀಲರ ಸಮಾವೇಶದಲ್ಲಿ ಮಾತನಾಡಿ, ಅಪ್ಪ-ಮಗ ದೆಹಲಿಗೆ ಹೋಗುತ್ತಿದ್ದಂತೆ ಯತ್ನಾಳ್ ಪಕ್ಷದಿಂದ ಉಚ್ಛಾಟನೆ ಖಚಿತ ಎಂಬ ಸುಳ್ಳು ಸುದ್ದಿ ಹಬ್ಬುತ್ತದೆ. ಆದರೆ ಅವರು ದೆಹಲಿಯಿಂದ ವಾಪಸ್ ಬರುವಾಗ ತಲೆ ಕೆಳಗೆ ಹಾಕಿಕೊಂಡು ಬರುತ್ತಾರೆ. ಅಪ್ಪ-ಮಗ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ಸಾಧ್ಯವಿಲ್ಲ ಎಂದು ಯತ್ನಾಳ್ ಲೇವಡಿ ಮಾಡಿದರು.
ಪಂಚಮಸಾಲಿ ಸಮುದಾಯ ಯತ್ನಾಳ್ ಪರವಿದೆ, ಪ್ರಖರ ಹಿಂದೂವಾದಿಗಳು. ನೀವು ಸುಮ್ಮನೆ ನಿಭಾಸಿಕೊಂಡು ಹೋಗಿ ಎಂದು ಅಪ್ಪ-ಮಗನಿಗೆ ಹೈಕಮಾಂಡ್ ಬುದ್ಧಿ ಹೇಳಿ ಕಳಿಸುತ್ತದೆ. ಪಂಚಮಸಾಲಿ ಮತ್ತು ಹಿಂದೂ ಶಕ್ತಿ ನನ್ನೊಂದಿಗೆ ಇದೆ ಎಂದರು
ನಮ್ಮ ಪಕ್ಷದಲ್ಲಿ ಒಂದು ಕುತಂತ್ರ ನಡೆಯಿತು. ಚುನಾವಣೆ ಘೋಷಣೆ ಆಗೋ ದಿನ ದೊಡ್ಡ ಕುತಂತ್ರ ನಡೆಯಿತು. ಯಡಿಯೂರಪ್ಪ ಬೇಡ ಅಂದ್ರು, ಅಮಿತ್ ಶಾ ಕೊಡಿ ಎಂದ್ರು, ರಾತ್ರಿ ಒಂದು ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ರು, ಇಷ್ಟು ದಿನ ಎಲ್ಲರ ನಾಟಕವನ್ನು ನೋಡಿದ್ದೇನೆ ಎಂದು ಯಡಿಯೂರಪ್ಪ ಹಾಗೂ ವಿಜಯಂದ್ರ ವಿರುದ್ಧ ಯತ್ನಾಳ್ ಆಕ್ರೋಶ ಹೊರ ಹಾಕಿದ್ದಾರೆ.
ವಿನಯ್ ಕುಲಕರ್ಣಿ ನಿಮ್ಮ ಮೇಲೆ ವಿಶ್ವಾಸ ಇದೆ, ಉಳಿದವರದ್ದು ನಾಟಕ್ ಕಂಪನಿ ಇದೆ. ನನ್ನನ್ನು ಚುನಾವಣೆಯಲ್ಲಿ ಸೋಲಿಸಲು ಪ್ರಯತ್ನ ಮಾಡಿದ್ರು. ನಾನು ಮಾತನಾಡಿದ್ದನ್ನು ಕೇಂದ್ರ ನಾಯಕರಿಗೆ ಕಳುಹಿಸುತ್ತಾರೆ. ದೆಹಲಿಯಲ್ಲೊಬ್ಬ ಭೂಪ ಇದ್ದಾನೆ, ನೀವು ಮಾತನಾಡುತ್ತಿರುವುದು ಸರಿಯಲ್ಲ ಎಂದು ನನಗೆ ಮೆಸೆಜ್ ಮಾಡ್ತಾನೆ. ಮೊನ್ನೆ ನಡೆದ ಸಭೆಯಲ್ಲಿ ನನ್ನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದ್ದೇನೆ. ನಮ್ಮ ನಿಯೋಗಕ್ಕೆ ಸಿಎಂ ಸ್ಪಂದಿಸದಿದ್ದರೆ, ಮುಂದಿನ ಹೋರಾಟ ಉಗ್ರವಾಗಿರಲಿದೆ.
ಬೆಳಗಾವಿ ಅಧಿವೇಶನದಲ್ಲಿ ಮುಂದಿನ ಹೋರಾಟ ಮಾಡೊಣ. ಸಿಎಂ ಸಿದ್ದರಾಮಯ್ಯ ಸುವರ್ಣಸೌಧ ಒಳಗೆ ಬರದಂತೆ ನೋಡಿಕೊಳ್ಳೊಣ. ನಾನು ಹಿಂದಿನ ಸಿಎಂ ಬೊಮ್ಮಾಯಿ ಜೊತೆಗೆ ನೇರವಾಗಿ ಜಗಳ ಆಡಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರು ಮೀಸಲಾತಿ ಕೊಡ್ತಿರೋ? ಇಲ್ಲವೋ? ನೇರವಾಗಿ ಹೇಳಬೇಕು. ನಮ್ಮ ಸಮಾಜದ ಬಗ್ಗೆ ಸಿಎಂಗೆ ಅಲರ್ಜಿ ಇದೆ, ನಮಗೆ ಕೊಡುವುದು ಡೌಟು, ಸಿಎಂ ಮುಂದೆ ಏನ್ ಮಾತನಾಡಬೇಕು ಎಂದು ಮೊದಲೇ ತೀರ್ಮಾನ ಮಾಡಬೇಕು. ಅಧಿವೇಶನ ಒಳಗಾಗಿ ಯಾವುದೇ ನಿರ್ಣಯ ಆಗದೇ ಇದ್ದರೆ ಮುಂದಿನ ಹೋರಾಟ ಮಾಡೋಣ. ಸುವರ್ಣ ಸೌಧ ಮುತ್ತಿಗೆ ಹಾಕೋಕೆ ಸಿದ್ದರಾಗೋಣ ಎಂದು ಕರೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ