
ಪ್ರಗತಿವಾಹಿನಿ ಸುದ್ದಿ: ಕೇಂದ್ರ ಗೃಹ ಸಚಿವ ಅಮಿತ್ ಶಾ, ತನಗೆ ಕರೆ ಮಾಡಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೇಳಿಕೆ ಸುಳ್ಳು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಮೊನ್ನೆ ವಿಜಯೇಂದ್ರ ಹುಟ್ಟುಹಬ್ಬದ ದಿನದಂದು, ಅಮಿತ್ ಶಾ ರಿಂದ ಕರೆ ಬಂದಿದೆ ಎಂಬ ರೀತಿಯಲ್ಲಿ ವಿಜಯೇಂದ್ರ ಫೋನ್ ನಲ್ಲಿ ಮಾತನಾಡುತ್ತಿದ್ದ ವಿಡಿಯೋ ಭಾರಿ ವೈರಲ್ ಆಗಿತ್ತು. ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಯತ್ನಾಳ್, ಫೋನ್ ನಲ್ಲಿ ಅಮಿತ್ ಶಾ ಇರಲೇ ಇಲ್ಲ. ಎಲ್ಲಾ ಸುಳ್ಳು ಹೇಳಿ ಡ್ರಾಮಾ ಮಾಡುತ್ತಿದ್ದಾರೆ. ಅತ್ತ ಯಾವ ಅಮಿತ್ ಶಾ ಇರಲಿಲ್ಲ. ಫೋನ್ ನಲ್ಲಿ ತಾನು ಆರು ದಿನಗಳಿಂದ ಬೆಳಗಾವಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿದ್ದಾರೆ. ಒಂದು ದಿನ ಹೋಗಿ ಆರು ದಿನಗಳಿಂದ ಭಾಗಿಯಾಗಿದ್ದಾಗಿ ಹೇಳಿದ್ದಾರೆ. ಅತ್ತ ಫೋನ್ ನಲ್ಲಿ ಅಮಿತ್ ಶಾ ಅಲ್ಲ, ಪ್ರೀತಂ ಗೌಡ ಇರುವುದು. ಆತನ ಬಳಿ ನೀನು ಅತ್ತಕಡೆ ಹೋಗಿ ಅಮಿತ್ ಶಾ ಎಂದು ಮಾತನಾಡು ಇತ್ತಕಡೆ ನಾನು ಮಾತನಾಡುತ್ತೇನೆ ಎಂದು ಹೇಳಿ ಮಾತನಾಡಿದ್ದಾರೆ ಎಂದರು.
ವಿಜಯೇಂದ್ರ ಪ್ರತಿಭಟನೆ ನಡೆಸಿರುವ ರೈತರ ಸಮಸ್ಯೆ, ಸಂಕಷ್ಟವನ್ನು ಸರಿಯಾಗಿ ಆಲಿಸಿಯೂ ಇಲ್ಲ. ಬೆಳಗಾವಿಯಲ್ಲಿ ಎಲ್ಲೋ ಒಂದು ಕಡೆ ಒಂದು ದಿನ ಬಂದು ಧರಣಿಯಲ್ಲಿ ತಾನು ಪಾಲ್ಗೊಂಡು ಅಲ್ಲಿಯೇ ಮಲಗಿದಂತೆ ನಾಟಕವಾಡಿ ಹೋಗಿದ್ದಾರೆ. ಅದನ್ನು ಅಮಿತ್ ಶಾ ಕರೆ ಮಾಡಿದ್ದಾಗ ಹೇಳಿದಂತೆ ಆರು ದಿನ ರೈತರೊಂದಿಗೇ ಇದ್ದೇನೆ ಎಂದು ಸುಳ್ಳು ಬಿಲ್ಡಪ್ ತೆಗೆದುಕೊಳ್ಳುತ್ತಿದ್ದಾರೆ. ಇದು ಮಾಧ್ಯಮಗಳಿಗೂ ಗೊತ್ತಿದ್ದರೂ ಅದನ್ನು ಖಂಡಿಸುತ್ತಲೂ ಇಲ್ಲ, ಪ್ರಶ್ನಿಸುತ್ತಲೂ ಇಲ್ಲ. ಅದನ್ನು ಇನ್ನಷ್ಟು ಮನಸ್ಸಿಗೆ ಬಂದಂತೆ ಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.




