Kannada NewsLatest

ಮೋದಿ ಭೇಟಿಯಾದ ಯಡಿಯೂರಪ್ಪ ನಿಯೋಗಕ್ಕೆ ನಿರಾಸೆ: ಕೇಂದ್ರದಿಂದ ಸಧ್ಯ ಪರಿಹಾರ ಸಾಧ್ಯತೆ ಇಲ್ಲ?

ಮೋದಿ ಭೇಟಿಯಾದ ಯಡಿಯೂರಪ್ಪ ನಿಯೋಗಕ್ಕೆ ನಿರಾಸೆ: ಕೇಂದ್ರದಿಂದ ಸಧ್ಯ ಪರಿಹಾರ ಸಾಧ್ಯತೆ ಇಲ್ಲ?

ಪ್ರಗತಿವಾಹಿನಿ ಸುದ್ದಿ, ನವ ದೆಹಲಿ –
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಪ್ರವಾಹದಿಂದ ತತ್ತರಿಸಿರುವ ಕರ್ನಾಟಕಕ್ಕೆ ಪರಿಹಾರ ಕಾರ್ಯಗಳಿಗಾಗಿ ಕೂಡಲೇ ಅನುದಾನ ಬಿಡುಗಡೆಗೆ ಕ್ರಮ ವಹಿಸುವಂತೆ ಮನವಿ ಮಾಡಿದರು.
ಕರ್ನಾಟಕದ ಪ್ರವಾಹ ಪರಿಸ್ಥಿತಿಯ ಗಂಭೀರತೆಯ ಕುರಿತು 45 ನಿಮಿಷಗಳ ಕಾಲ ಚರ್ಚಿಸಿ, ಪ್ರಧಾನಿಯವರಿಗೆ ಮನವರಿಕೆ ಮಾಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ನಷ್ಟ ಸಂಭವಿಸಿದೆ. ಪುನರ್ನಿಮಾಣ ಮತ್ತು ಪರಿಹಾರ ಕಾರ್ಯಗಳಿಗೆ ಹೆಚ್ಚುವರಿ ಅನುದಾನ ಅಗತ್ಯವಿದೆ ಎಂದು ವಿವರಿಸಿದರು.
ಇದಕ್ಕೆ ಉತ್ತರಿಸಿದ ಪ್ರಧಾನಿಯವರು ನಷ್ಟದ ಅಂದಾಜು ಮಾಡಲು ಕೇಂದ್ರ ಸರ್ಕಾರದ ಅಧ್ಯಯನ ತಂಡವನ್ನು ಕಳುಹಿಸಲಾಗುವುದು ಎಂದರು.

ಪರಿಹಾರದ ಮಾತನಾಡದ ಮೋದಿ 

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಈಗಾಗಲೆ ಬಂದು ಪರಿಶೀಲಿಸಿ ಹೋಗಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹಲ್ಲಾದ ಜೋಶಿ ಹಾಗೂ ರೈಲ್ವೆ ಸಚಿವ ಸುರೇಶ ಅಂಗಡಿ ಕ್ಷೇತ್ರದಲ್ಲೇ ಅಪಾರ ಪ್ರಮಾಣದಲ್ಲಿ ಪ್ರವಾಹದಿಂದ ಹಾನಿಯಾಗಿದೆ. ಯಡಿಯೂರಪ್ಪ ಇದೀಗ ಎರಡನೇ ಬಾರಿಗೆ ದೆಹಲಿಗೆ ತೆರಳಿ ಪರಿಸ್ಥಿತಿ ವಿವರಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿ ಸರಕಾರವಿರುವುದರಿಂದ ಹೆಚ್ಚಿನ ಪರಿಹಾರ ಬರಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಇಷ್ಟು ದಿನ ಕಳೆದರೂ ಕೇಂದ್ರದಿಂದ ಒಂದು ಪೈಸಾ ಪರಿಹಾರ ಬಂದಿಲ್ಲ. ಸಚಿವರೆಲ್ಲ ಬಂದು ಹೋಗಿದ್ದೇ ಬಂತು. ಇದೀಗ ಮತ್ತೆ ಪ್ರಧಾನಿ ಮೋದಿಅಧ್ಯಯನಕ್ಕೆ ನಿಯೋಗ ಕಳಿಸಲಾಗುವುದು ಎಂದರೇ ವಿನಃ ಪರಿಹಾರದ ಮಾತಾಡಲೇ ಇಲ್ಲ.
ಇದರಿಂದಾಗಿ ದೊಡ್ಡ ನಿರೀಕ್ಷೆ ಇಟ್ಟುಕೊಂಡು ಹೋಗಿದ್ದ ಯಡಿಯೂರಪ್ಪ ನಿಯೋಗಕ್ಕೆ ದೊಡ್ಡ ನಿರೀಕ್ಷೆಯಾಗಿದೆ.
ಪ್ರಧಾನಿ ಭೇಟಿಯಾದ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಸುರೇಶ್ ಅಂಗಡಿ ಹಾಗೂ ಪ್ರಹ್ಲಾದ ಜೋಷಿ, ಶಾಸಕರಾದ ಜಗದೀಶ್ ಶೆಟ್ಟರ್, ಆರ್. ಅಶೋಕ್ ಹಾಗೂ ಗೋವಿಂದ ಎಂ. ಕಾರಜೋಳ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಉಪಸ್ಥಿತರಿದ್ದರು.

ಸ್ಪಷ್ಟನೆ ನೀಡಿದ ಯಡಿಯೂರಪ್ಪ

ಪ್ರವಾಹ ಪೀಡಿತ ಗ್ರಾಮಗಳ ಅಭಿವೃದ್ದಿಗಾಗಿ 10 ಕೋಟಿ ರೂ. ಗಳಿಗೂ ಹೆಚ್ಚು ನೆರವು ನೀಡುವ ಸಂಸ್ಥೆಗಳ ಹೆಸರನ್ನು ಅಲ್ಲಿ ನಿರ್ಮಿಸಲಾಗುವ ನೂತನ ಬಡಾವಣೆಗಳಿಗೆ ಇಡಲಾಗುವುದು. ಗ್ರಾಮದ ಹೆಸರನ್ನು ಬದಲಾಯಿಸುವ ಪ್ರಸ್ತಾಪವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಮೊದಲು, ಗ್ರಾಮಕ್ಕೆ ದಾನಿಗಳ ಹೆಸರಿಡುವುದಾಗಿ ಹೇಳಿ ಯಡಿಯೂರಪ್ಪ ವಿವಾದಕ್ಕೊಳಗಾಗಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button