ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಬೆಳಗಾವಿಗೆ ಆಗಮಿಸಲಿದ್ದಾರೆ.
ಬೆಳಗ್ಗೆ 9.30ಕ್ಕೆ ವಿಶೇಷ ವಿಮಾನದಲ್ಲಿ ಬೆಂಗಳೂರಿನಿಂದ ಹೊರಡಲಿರುವ ಸಿಎಂ 10.40ಕ್ಕೆ ಸಾಂಬ್ರಾ ವಿಮಾನ ನಿಲ್ದಾಣ ತಲುಪಲಿದ್ದಾರೆ. ಅಲ್ಲಿಂದ ನೇರವಾಗಿ ಆರ್ ಎಸ್ ಎಸ್ ಕಾರ್ಯಾಲಯಕ್ಕೆ ತೆರಳಿ ಅಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಸಂಘದ ಹಿರಿಯ ಪ್ರಚಾರಕ ಹರಿಭಾವು ವಝೆ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸುವರು.
ನಂತರ ಸುವರ್ಣ ವಿಧಾನಸೌಧಕ್ಕೆ ತೆರಳಿ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಪರಿಸ್ಥಿತಿ, ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಪರಿಶೀಲಿಸುವರು.
ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೋನಾ ನಿರ್ವಹಣೆ ವಿಫಲವಾಗಿರುವ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಆಗಮಿಸುತ್ತಿದ್ದಾರೆ. ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್, ಅಭಯ ಪಾಟೀಲ ಮೊದಲಾದವರು ಬಿಮ್ಸ್ ಅನಾರೋಗ್ಯದ ಕುರಿತು ಸಾಕಷ್ಟು ದೂರುಗಳನ್ನು ಸಲ್ಲಿಸಿದ್ದರು.
ಬಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಕುರಿತು ಸಾರ್ವಜನಿಕವಾಗಿ ಮಾತನಾಡಲಾಗದಂತಹ ಸ್ಥಿತಿ ಇದೆ ಎಂದು ಸ್ವತಃ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದರು. ಲಕ್ಷ್ಮಣ ಸವದಿ ಸ್ವತಃ ಪಿಪಿಇ ಕಿಟ್ ಧರಿಸಿ ಬಿಮ್ಸ್ ಸುತ್ತಾಡಿ ಬಂದಿದ್ದರು. ಜಾತ್ರೆಗೆ ಬಂದಿದ್ದೇನೋ ಆಸ್ಪತ್ರೆಗೆ ಬಂದಿದ್ದೇನೋ ಗೊಂದಲವಾಗುತ್ತಿದೆ. ಒಳಗಡೆ 2 ಶವಗಳು ನನ್ನ ಕಣ್ಣಿಗೇ ಕಾಣಿಸಿವೆ ಎಂದಿದ್ದರು. ಮುಖ್ಯಮಂತ್ರಿಗಳಿಗೆ ಎಲ್ಲವನ್ನೂ ವಿವರಿಸಿ ಇಲ್ಲಿಯೇ ಬಂದು ಸಭೆ ಮಾಡುವಂತೆ ವಿನಂತಿಸುತ್ತೇನೆ ಎಂದೂ ಹೇಳಿದ್ದರು.
ಅಧಿಕೃತ ಅಂಕೆ ಸಂಖ್ಯೆಗಳ ಪ್ರಕಾರವೇ ಬಿಮ್ಸ್ ನಲ್ಲಿ 150ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಯಾರು ಬಂದರೂ ನಮ್ಮಲ್ಲಿ ಬೆಡ್ ಇಲ್ಲ ಎನ್ನುವ ಸಿದ್ಧ ಉತ್ತರ ಮತ್ತು ಒಳಗಡೆ ಜಾತ್ರಯೋಪಾದಿಯಲ್ಲಿ ಜನಸಾಗರ, ರೋಗಿಗಳನ್ನು ಹೇಳಕೇಳುವವರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು.
ಇದೀಗ ಯಡಿಯೂರಪ್ಪ ಆಗಮಿಸುತ್ತಿದ್ದಾರೆ. ಯಡಿಯೂರಪ್ಪ ಬರುವುದು ನಿಗದಿಯಾಗುತ್ತಿದ್ದಂತೆ ಬಿಮ್ಸ್ ಆಡಳಿತಾಧಿಕಾರಿ ಸಯ್ಯದ್ ಆಫ್ರಿನ್ ಬಳ್ಳಾರಿ ಪರಿಶೀಲನೆ ನಡೆಸಿ ಕೆಲವು ಕ್ರಮಗಳನ್ನು ಕೈಗೊಂಡಿದ್ದರು. ನಿರ್ದೇಶಕ ವಿನಯ ದಾಸ್ತಿಕೊಪ್ಪ ಅವರನ್ನು ದೀರ್ಘ ರಜೆಯ ಮೇಲೆ ಕಳಿಸಲಾಗಿದೆ.
ಮುಖ್ಯಮಂತ್ರಿಗಳು ಬರುವ ಮುನ್ನವೇ ದಾಸ್ತಿಕೊಪ್ಪ ಅವರನ್ನು ರಜೆಯ ಮೇಲೆ ಕಳಿಸಿದ್ದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಯಡಿಯೂರಪ್ಪ ಬಿಮ್ಸ್ ಅನಾರೋಗ್ಯಕ್ಕೆ ಯಾವರೀತಿಯ ಚಿಕಿತ್ಸೆ ಕೊಡಲಿದ್ದಾರೆ ಕಾದುನೋಡಬೇಕಿದೆ.
ಮಧ್ಯಾಹ್ನ 1.30ಕ್ಕೆ ಸಿಎಂ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ತೆರಳುವರು. ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಧಾರವಾಡ ಜಿಲ್ಲೆಯ ಕೊರೋನಾ ಪರಿಸ್ಥಿತಿಯ ಅವಲೋಕನ ಸಭೆ ನಡೆಯಲಿದೆ.
ಬೆಳಗಾವಿಯಲ್ಲಿ ನಾಳೆ ಹರಿಬಾವು ವಝೆ ಭೇಟಿ ಮಾಡಲಿರುವ ಯಡಿಯೂರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ