ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಪಂಚಮಸಾಲಿ ಜನಾಂಗಕ್ಕೆ 2 ಎ ಮೀಸಲಾತಿ ನೀಡಲು ನನ್ನಿಂದ ಸಾಧ್ಯವಿಲ್ಲ. ಏನಿದ್ದರೂ ಕೇಂದ್ರ ನಾಯಕರೊಂದಿಗೆ ಮಾತನಾಡಿ ಎಂದು ವಿಧಾನಸೌಧದಲ್ಲಿ ಶುಕ್ರವಾರ ಮಧ್ಯಾಹ್ನವಷ್ಟೆ ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾತ್ರಿ ತಮ್ಮ ನಿಲುವನ್ನು ಬದಲಿಸಿದ್ದಾರೆ. ತಮ್ಮದೇ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ.
ವಿಧಾನಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ನಮ್ಮದು ರಾಷ್ಟ್ರೀಯ ಪಕ್ಷ. ಹಾಗಾಗಿ ನಾವಿಲ್ಲಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಹಾಗಾಗಿ ನನ್ನಿಂದ ಈ ವಿಷಯದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ರಾತ್ರಿ ಹೊತ್ತಿಗೆ ಪಂಚಮಸಾಲಿಗೆ 2ಎ ಮೀಸಲಾತಿ ಕೊಡುವ ಸಂಬಂಧ ಹಿಂದುಳಿದ ಪರ್ಗಗಳ ಆಯೋಗಕ್ಕೆ ಪತ್ರ ಬರೆದಿರುವ ಸಿಎಂ, ಇದರ ಕುರಿತು ಪೂರ್ಣ ಮಾಹಿತಿ ಒದಗಿಸುವಂತೆ ತಿಳಿಸಿದ್ದಾರೆ. 2 ಎ ಮೀಸಲಾತಿ ನೀಡುವ ವಿಷಯದಲ್ಲಿ ಪೂರ್ಣ ಹಿಂದೆ ಸರಿದಿದ್ದ ಯಡಿಯೂರಪ್ಪ ರಾತ್ರಿಯಾಗುತ್ತಿದ್ದಂತೆ ಪಾಸಿಟಿವ್ ಆಗಿದ್ದಾರೆ.
ಈ ಸಂಬಂಧ ನಡೆಯುತ್ತಿರುವ ಪಾದಯಾತ್ರೆಯ ನೇತೃತ್ವ ವಹಿಸಿದ್ದ ಜಯಮೃತ್ಯುಂಜಯ ಸ್ವಾಮಿಗಳು, ಯಡಯೂರಪ್ಪನವರಿಗೆ ಬುದ್ದಿಭ್ರಮಣೆಯಾಗಿದೆ. ಅವರಿಂದ ರಾಜಿನಾಮೆ ಪಡೆದು ಬೇರೊಬ್ಬ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಬೇಕು ಎಂದಿದ್ದರು. ಇದಕ್ಕೆ ಬೆದರಿಯೋ ಅಥವಾ ಇನ್ನೇನಾದರೂ ಕಾರಣವಿದೆಯೋ… ಅಂತೂ ತಮ್ಮದೇ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ