
ಪ್ರಗತಿವಾಹಿನಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದ ರಂಜಿತಾ ಬನಸೋಡೆ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಹಿಂದೂಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿವೆ.
ರಂಜಿತಾ ಹತ್ಯೆ ಸಾಕಷ್ಟು ದೊಡ್ಡ ವಿವಾದ ಸೃಷ್ಟಿ ಮಾಡಿದ್ದು, ಘಟನೆ ನಡೆದ ಬೆನ್ನಲ್ಲೇ ಅಲರ್ಟ್ ಆಗಿರುವ ಶಾಸಕರು, ಈಗಾಗಲೇ ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಾರೆ. ಘಟನೆಯ ಸಂಪೂರ್ಣ ಮಾಹಿತಿಯನ್ನು ಪಡೆದಿರುವ ಅವರು, ತನಿಖೆಯನ್ನು ಚುರುಕುಗೊಳಿಸುವಂತೆ ಮತ್ತು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಂಜಿತಾ ಕೊಲೆ ಆಕ್ರೋಶಕ್ಕೆ ಕಾರಣವಾಗಿದ್ದು, ಹಿಂದೂ ಮಹಿಳೆಯ ಹತ್ಯೆ ಖಂಡಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಭಾನುವಾರ ಯಲ್ಲಾಪುರ ಬಂದ್ಗೆ ಕರೆ ನೀಡಿದ್ದಾರೆ. ಹಿಂದೂ ಪರ ಸಂಘಟನೆಗಳು ಯಲ್ಲಾಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು.
ಇನ್ನು ಈ ಘಟನೆ ಬಗ್ಗೆ ಮೃತ ರಂಜಿತಾ ಸಹೋದರ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಜಾನುವಾರು ರೀತಿಯಲ್ಲಿ ಕತ್ತು ಕೊಯ್ದಿದ್ದಾನೆ, ಹಾಡಹಗಲೇ ಕೃತ್ಯ ನಡೆಸಿದ್ದಾನೆ, ನನ್ನ ಕೈಯಲ್ಲಿಯೇ ತಂಗಿ ಜೀವ ಬಿಟ್ಟಿದ್ದಾಳೆ ಎಂದು ಕಣ್ಣೀರಿಟ್ಟಿದ್ದಾರೆ.


