ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಯೆಸ್ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಂಬಂಧಿಸಿದಂತೆ ರಿಲಾಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿಗೊಳಿಸಿದೆ.
ಈಗಾಗಲೇ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಮತ್ತು ಇತರರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ತನಿಖೆಗೆ ಸಂಬಂಧಪಟ್ಟಂತೆ ಇದೀಗ ಅನಿಲ್ ಅಂಬಾನಿಗೆ ಸಮನ್ಸ್ ಜಾರಿಗೊಳಿಸಿದೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್‍ನಿಂದ ಬಹುಕೋಟಿ ರೂ.ಗಳ ಸಾಲ ಎತ್ತುವಳಿ ನಂತರ ಅದನ್ನು ಹಿಂದಿರುಗಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ದೊಡ್ಡ ಸಂಸ್ಥೆಗಳಲ್ಲಿ ರಿಲಾಯನ್ಸ್ ಗ್ರೂಪ್ ಸಹ ಒಂದು. ಈ ಹಿನ್ನೆಲೆಯಲ್ಲಿ ಮುಂಬೈನ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ವಿಚಾರಣೆಗೆ ಒಳಪಡುವಂತೆ ಅನಿಲ್ ಅಂಬಾನಿಗೆ ಸೂಚಿಸಲಾಗಿದೆ.
ವೈಯಕ್ತಿಕ ಕಾರಣಗಳನ್ನು ನೀಡಿ ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಅಂಬಾನಿ ಮನವಿ ಮಾಡಿದ್ದು, ಅವರ ವಿಚಾರಣೆಗಾಗಿ ಹೊಸ ದಿನಾಂಕವನ್ನು ನಿಗದಿಗೊಳಿಸುವುದಾಗಿ ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಅನಿಲ್ ಅಂಬಾನಿ ಒಡೆತನದ ಸಮೂಹ ಸಂಸ್ಥೆಗಳು ಯೆಸ್ ಬ್ಯಾಂಕ್‍ನಿಂದ 12,600 ಕೋಟಿ ರೂ. ಸಾಲ ಪಡೆದಿದ್ದು, ಅದನ್ನು ಮರುಪಾವತಿ ಮಾಡದೆ ಸುಸ್ತಿದಾರ ಕಂಪನಿ ಎನಿಸಿದೆ.
ಅನಿಲ್ ಅಂಬಾನಿ ಗ್ರೂಪ್, ಎಸ್ಸೆಲ್, ಐಎಲ್‍ಎಫ್‍ಎಸ್, ಡಿಎಚ್‍ಎಫ್‍ಎಲ್ ಮತ್ತು ವೊಡಾಫೋನ್ ಸೇರಿದಂತೆ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಯೆಸ್ ಬ್ಯಾಂಕ್‍ನಿಂದ ಕೋಟ್ಯಂತರ ರೂ.ಸಾಲ ಪಡೆದಿವೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ