*ಬರಪೀಡಿತ ತಾಲೂಕಿನ ಜನತೆಗೆ ಗುಡ್ ನ್ಯೂಸ್: ಎತ್ತಿನಹೊಳೆ ನೀರು ಹರಿಸುವ ಏತ ಕಾಮಗಾರಿ ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿ*
ಪ್ರಗತಿವಾಹಿನಿ ಸುದ್ದಿ: ಬಹುನಿರೀಕ್ಷಿತ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಏತ (Lift) ಕಾಮಗಾರಿಗಳ ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಈ ಯೋಜನೆ ಉದ್ಘಾಟನಾ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹರ್ಷ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆ ಸಕಲೇಶಪುರದ ಕೆಸವನಹಳ್ಳಿ ಗ್ರಾಮದ ಕುಂಬರಡಿ ಕಾಫಿ ಎಸ್ಟೇಟ್ ಬಳಿ ಎತ್ತಿನಹೊಳೆ ಯೋಜನೆಯ ಪರೀಕ್ಷಾರ್ಥ ನೀರು ಹರಿಸುವ ಕಾರ್ಯಚರಣೆಯನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬುಧವಾರ ಪರಿಶೀಲನೆ ಮಾಡಿದರು.
ನಂತರ ಸಕಲೇಶಪುರದ ದೊಡ್ಡನಗರದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು, “ಎತ್ತಿಹೊಳೆ ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ತಾಯಿ ಗಂಗೆ ಪೂಜೆ ಮಾಡಿ ಖುದ್ದಾಗಿ ನಾನೇ ಪ್ರಾಯೋಗಿಕ ಪರೀಕ್ಷೆಗೆ ಚಾಲನೆ ನೀಡಿದ್ದೇನೆ. ನಮ್ಮ ಅಧಿಕಾರಿಗಳು ಈ ಯೋಜನೆಯ ವಿವರ ಮತ್ತು ವಿಡಿಯೋಗಳನ್ನು ತೋರಿಸಿದರು. ನಾನು ಕಣ್ಣಾರೆ ನೋಡಬೇಕು ಎಂದು ಬಂದಿದ್ದೇನೆ. ಈ ಹಿಂದೆ ಭೇಟಿ ನೀಡಿದಾಗ ಶೀಘ್ರವಾಗಿ ಕೆಲಸ ಮುಗಿಸಬೇಕು ಎಂದು ತಿಳಿಸಿದ್ದೇ, ಅದರಂತೆ ಒಂದೆರಡು ತಿಂಗಳು ತಡವಾಗಿಯಾದರೂ ಕೆಲಸ ಮುಗಿದಿದೆ” ಎಂದು ತಿಳಿಸಿದರು.
“ಒಟ್ಟು 8 ವಿಯರ್ ಗಳಲ್ಲಿ 5 ವಿಯರ್ ಗಳಿಗೆ ಚಾಲನೆ ನೀಡಲಾಗಿದೆ. 1,500 ಕ್ಯೂಸೆಕ್ಸ್ ನೀರನ್ನು ಮೇಲಕ್ಕೆ ಎತ್ತಲಾಗಿದೆ. ನೀರು ಕಡಿಮೆ ಆಗುವ ಮೊದಲು ಶುಭದಿನ, ಶುಭ ಘಳಿಗೆ ನೋಡಿ ಮುಖ್ಯಮಂತ್ರಿಗಳಿಂದ ಚಾಲನೆ ಮಾಡಿಸಲಾಗುವುದು. ಈ ದೊಡ್ಡ ಯೋಜನೆಯನ್ನು ಕಣ್ಣಾರೆ ನೋಡಬೇಕು ಎಂದು ಭೇಟಿ ನೀಡಿದೆ. ನಮ್ಮ ಎಲ್ಲಾ ಮಂತ್ರಿಗಳಿಗೂ ತಿಳಿಸಿ ಎಲ್ಲರೂ ಸೇರಿ ಉದ್ಘಾಟನೆಯಲ್ಲಿ ಭಾಗವಹಿಸುತ್ತೇವೆ” ಎಂದು ತಿಳಿಸಿದರು.
7 ಜಿಲ್ಲೆ, 75 ಲಕ್ಷ ಜನರಿಗೆ ಅನುಕೂಲ:
ನಂತರ ಯೋಜನೆ ಕುರಿತು ವಿವರಣೆ ನೀಡಿದ ಅವರು, “ಈ ಯೋಜನೆಯಿಂದ 24.01 ಟಿಎಂಸಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ಕುಡಿಯಲು ನೀರು ಪೂರೈಸಲಾಗುವುದು. ಬರಪೀಡಿತ 29 ತಾಲೂಕಿನ 38 ಪಟ್ಟಣ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ ಜನರು ಮತ್ತು ಜಾನುವಾರುಗಳಿಗೆ 14.056 ಟಿಎಂಸಿ ನೀರನ್ನು ಒದಗಿಸಲಾಗುವುದು. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ತುಮಕೂರು ವ್ಯಾಪ್ತಿಯ 527 ಕೆರೆಗಳಿಗೆ 9.953 ಟಿಎಂಸಿ ನೀರನ್ನು ಹರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ” ಎಂದು ತಿಳಿಸಿದರು.
“23,251 ಕೋಟಿ ಮೊತ್ತದ ಈ ಮಹತ್ವಾಕಾಂಕ್ಷಿ ಯೋಜನೆಯು ಹಲವು ವರ್ಷಗಳಿಂದ ಮೊದಲನೇ ಹಂತದಲ್ಲಿ ಏತ (Lift) ಮತ್ತು ವಿದ್ಯುತ್ ಪೂರೈಕೆ ಕಾಮಗಾರಿಗಳಲ್ಲಿ ಅಚಡಣೆ ಉದ್ಭವಿಸಿದ್ದ ಕಾರಣ ಈ ಯೋಜನೆ ಪೂರ್ಣಗೊಳಿಸುವುದು ವಿಳಂಬವಾಗಿತ್ತು. ಈ ಅಡಚಣೆಗಳನ್ನು ನಿವಾರಣೆ ಮಾಡಿಕೊಂಡು ಈಗ ಯೋಜನೆಯು ನಿರ್ಣಾಯಕ ಘಟ್ಟ ತಲುಪಿದೆ” ಎಂದರು.
“ಈ ಯೋಜನೆಯಲ್ಲಿ ವಿಯರ್ 1,2,4,5 ಮತ್ತು 8ರಿಂದ 1571 ಕ್ಯೂಸೆಕ್ಸ್ ನೀರನ್ನು ಎತ್ತಿ ವಿತರಣಾ ತೊಟ್ಟಿ-3ಕ್ಕೆ ಪೂರೈಸಲಾಗುವುದು. ನಂತರ ಇಲ್ಲಿಂದ ವಿತರಣಾ ತೊಟ್ಟಿ-4ರ ಮೂಲಕ ಗುರುತ್ವ ಕಾಲುವೆಗಳಿಂದ ಈ ನೀರನ್ನು ಹರಿಸಲಾಗುವುದು. ಈ ನೀರು ಒಟ್ಟು 252.87 ಕಿ.ಮೀ ಉದ್ದವಿದ್ದು, ಈ ಪೈಕಿ 164 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಇನ್ನು 25.87 ಕಿ.ಮೀ ಗುರುತ್ವ ಕಾಲುವೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಮಧ್ಯೆ 42 ಕಿ.ಮೀ ನಂತರ ಅರಣ್ಯ ಮತ್ತು ಭೂಸ್ವಾಧೀನ ಸಮಸ್ಯೆಯಿಂದಾಗಿ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ 32.50 ಕಿ.ಮೀ ನಂತರ ನೀರನ್ನು ನಾಲಾ ಎಸ್ಕೇಪ್ ಮೂಲಕ 132.50 ಕಿ.ಮೀ ದೂರದ ವಾಣಿವಿಲಾಸ ಸಾಗರಕ್ಕೆ ವೇದಾ ವ್ಯಾಲಿ ಮೂಲಕ ತಾತ್ಕಾಲಿಕವಾಗಿ ನೀರನ್ನು ಹರಿಸಲು ಕಾರ್ಯಕ್ರಮ ರೂಪಿಸಲಾಗಿದೆ” ಎಂದು ಮಾಹಿತಿ ನೀಡಿದರು.
“ಒಂದಷ್ಟು ಕಡೆ ಅರಣ್ಯ ಇಲಾಖೆಗೆ ಸೇರಿದ ಭೂಮಿಯ ತೊಂದರೆಯಿದೆ. ಅದನ್ನು ಬಗೆಹರಿಸಲಾಗುವುದು. ಇದರ ಬಗ್ಗೆ ಅರಣ್ಯ ಇಲಾಖೆಯವರ ಬಳಿ ನಾನು ಮತ್ತು ಸಿಎಂ ಅವರು ಮಾತನಾಡಲಾಗುವುದು” ಎಂದರು.
“ಈ ಯೋಜನೆಗಾಗಿ 2024ರ ಜುಲೈ ಅಂತ್ಯದರೆಗೆ 16,152 ಕೋಟಿಗಳ ಆರ್ಥಿಕ ಪ್ರಗತಿ ಸಾಧಿಸಲಾಗಿದ್ದು, 31-03-2027ರ ವೇಳೆಗೆ ಈ ಯೋಜನೆಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಇನ್ನು ಈ ಯೋಜನೆಯಲ್ಲಿ ಜಲಾನಯನ ಪ್ರದೇಶಗಳಲ್ಲಿ ನಿರ್ಮಿಸಲಾಗಿರುವ 8 ವಿಯರ್ ಗಳ ಬಳಿ ನೀರಿನ ಹರಿವನ್ನು ನಿಖರವಾಗಿ ಅಳೆಯುವ ಉದ್ದೇಶದಿಂದ ಜರ್ಮನಿ ಮೂಲದ ತಂತ್ರಜ್ಞಾನ (Real Time Discharge Measurement) ಅಳವಡಿಸಲಾಗಿದೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಜೂನ್ 1ರಿಂದ ಆಗಸ್ಟ್ 20ರವರೆಗೆ ಒಟ್ಟು 13.34 ಟಿಎಂಸಿ ನೀರಿನ ಹರಿವು ದಾಖಲಾಗಿದೆ” ಎಂದು ತಿಳಿಸಿದರು.
ಪ್ರಶ್ನೋತ್ತರ:
ಅರಣ್ಯ ಇಲಾಖೆಯಿಂದ ಒಂದಷ್ಟು ಕಡೆ ಅಡ್ಡಿ ಉಂಟಾಗಿದೆ ಎಂದಾಗ “ಹೌದು ಅಡ್ಡಿ ಉಂಟಾಗಿದೆ. ಅವರ ಬಳಿ ಮಾತನಾಡಿ ನಮ್ಮ ಕೆಲಸ ಮುಂದುವರೆಸುತ್ತೇವೆ. ಜೊತೆಗೆ ಬದಲಿ ಭೂಮಿಯನ್ನು ಈಗಾಗಲೇ ಅವರಿಗೆ ನೀಡಲಾಗಿದೆ” ಎಂದರು.
ಸಾಕಷ್ಟು ಕಡೆ ಲೀಕೇಜ್ ಸಮಸ್ಯೆಯಾಗಿದೆ ಎಂದು ಕೇಳಿದಾಗ “ಅದನ್ನೆಲ್ಲಾ ದುರಸ್ತಿ ಮಾಡಲಾಗುವುದು” ಎಂದರು.
ಅವೈಜ್ಞಾನಿಕವಾಗಿ ಗುಡ್ಡ ಅಗೆಯಲಾಗಿದೆ, ಪರಿಹಾರ ಸರಿಯಾಗಿ ಬಂದಿಲ್ಲ ಎನ್ನುವ ಆರೋಪದ ಬಗ್ಗೆ ಕೇಳಿದಾಗ “ಅವರೆಲ್ಲರ ಬಳಿ ನಾನು ಮಾತನಾಡುತ್ತೇನೆ” ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ