Latest

ಹೃದಯವಂತನಾಗದಿದ್ದರೆ ಕಲಾವಿದನಾಗಲು ಸಾಧ್ಯವಿಲ್ಲ

ಜಯಶ್ರೀ ಅಬ್ಬಿಗೇರಿ

ದಟ್ಟ ಕಾಡಿನ ನಡುವೆ ಹಾಲು ನೊರೆಯ ಬಣ್ಣದ ಸಣ್ಣ ಝರಿಯೊಂದು ಜುಳು ಜುಳು ಸದ್ದು ಮಾಡುತ್ತ ಹರಿಯುವುದು ಕಿವಿಗೆ ಬೀಳುತ್ತಿದ್ದರೆ ಅದೆಷ್ಟು ಆನಂದ! ಅದನ್ನು ಆಲಿಸಿದವರಿಗೆ ಗೊತ್ತು ಅದರ ಖುಷಿ. ಸುತ್ತಲಿರುವ ವನಸಿರಿ ಮುಗಿಲು ಚುಂಬಿಸಲು ತವಕಿಸುತ್ತಿರುವ ಬೆಟ್ಟಗಳ ಸಾಲು ಆಳವಾದ ಕೊಳ್ಳಗಳು ಆಗಸದಲ್ಲಿ ತೇಲುವ ಬೆಳ್ಮುಗಿಲುಗಳು ಅದರ ಕೆಳಗೆ ಸುಮಧುರ ಕಲರವ ಮೂಡಿಸುವ ಹಕ್ಕಿಗಳ ಗುಂಪು ಘಮಘಮಿಸುವ ಹೂವು ಹೀಗೆ ಪ್ರಕೃತಿ ಸಿರಿಯ ಸೊಬಗಿನ ಪಟ್ಟಿ ಮಾಡುತ್ತ ಹೋದರೆ ಹನುಮನ ಬಾಲದಂತೆ ಬೆಳೆಯುತ್ತದೆ. ಹಾಗೆ ನೋಡಿದರೆ ಈ ಜಗದಲ್ಲಿ ಯಾವುದೂ ಶಾಶ್ವತವಾದುದಿಲ್ಲ. ಯಾವ ವಸ್ತುಗಳು ಸ್ಥಿರವಾಗಿಯೂ ಇರುವುದಿಲ್ಲ. ಬೀಸುವ ಗಾಳಿ ಒಂದೇ ಸಮನೇ ಬೀಸದು. ತನ್ನ ದಿಕ್ಕನ್ನು ಬದಲಿಸುತ್ತಲೇ ಇರುತ್ತದೆ. ಒಮ್ಮೆ ತಂಗಾಳಿಯಂತೆ ತಂಪು ಎರೆಯುತ್ತದೆ. ಮತ್ತೊಮ್ಮೆ ಬಿರುಗಾಳಿಯಾಗುತ್ತದೆ. ಶತಮಾನಗಳಷ್ಟು ಹಳೆಯದಾದ ಮರಗಳನ್ನು ಬೇರು ಸಮೇತ ಕಿತ್ತೊಗೆಯುತ್ತದೆ. ಅದರ ಪಕ್ಕದಲ್ಲೇ ಆಗತಾನೆ ಚಿಗುರೊಡೆದ ಹಸಿರು ಎಲೆಯ ಸಸಿಯೊಂದು ನಳನಳಿಸುತ್ತಿರುತ್ತದೆ. ಎಲೆಯ ಮೇಲೆ ತಾಜಾ ಇಬ್ಬನಿಯೊಂದು ಬಾಲ ರವಿ ಕಿರಣಗಳಿಗೆ ಮಿನುಗಿ ನಗು ಸೂಸುತ್ತಿರುತ್ತದೆ. ಋತುಗಳು ಅರಳುತ್ತವೆ ಮತ್ತೆ ಮತ್ತೆ ಮರಳುತ್ತವೆ. ಹರಿಯುವ ನೀರು ಒಮ್ಮೆ ಚಿಲುಮೆಯಾಗಿ ಚಿಮ್ಮಿದರೆ ಮತ್ತೊಮ್ಮೆ ಸೆಲೆ ಬತ್ತಿ ಹೋದ ಸ್ಥಿತಿ. ಅಂದರೆ ಕ್ಷಣವಿದ್ದ ಸ್ಥಿತಿ ಮತ್ತೊಂದು ಕ್ಷಣದಲ್ಲಿ ಬದಲಾಗುವುದೇ ಜಗದ ನಿಯಮ. ದೇವನೆಂಬ ಕಲಾವಿದನ ಕಲೆಯನ್ನು ನೋಡಲು ಕಣ್ಣೆರಡು ಸಾಲವು. ಒಳಗಿನ ಕಣ್ಣು ತೆರೆಯಲೇ ಬೇಕು. ಅಂತರಂಗದ ಕಣ್ಣು ಒಮ್ಮೆ ತೆರೆದರೆ ಸಾಕು ಜಗ ಶಾಂತಿ ನೆಮ್ಮದಿಯ ಬೀಡು ಎಂದೆನಿಸದೇ ಇರದು.
ಇವೆಲ್ಲವನ್ನು ನೋಡಿಯೂ ನೋಡದಂತೆ ಬದುಕಿನ ದಾರಿ ಸವೆಸುವುದನ್ನು ರೂಢಿ ಮಾಡಿಕೊಂಡು ಬಿಟ್ಟಿದ್ದೇವೆ. ಒಂದು ರೀತಿಯ ಸುರಕ್ಷಿತ ವಲಯದಲ್ಲಿ ನಮ್ಮನ್ನು ನಾವು ಬಂಧಿಸಿಕೊಂಡು ಜೀವನವೆಂದರೆ ಇದೆ, ಇದರಾಚೆ ಏನಿಲ್ಲವೆಂದು ಕಟ್ಟಿ ಹಾಕಿದ ಬದುಕಲ್ಲಿ ದಿನಗಳೆಯುತ್ತೇವೆ. ಶಾಶ್ವತವಲ್ಲದ ಬದುಕಿನಲ್ಲಿ ಅಸ್ಥಿರತೆ ಸಾಮಾನ್ಯ ಎಂಬುದನ್ನು ನಂಬಲು ಸಾಧ್ಯವೇ ಆಗುತ್ತಿಲ್ಲ. ಸುರಕ್ಷಿತ ವಲಯದಲ್ಲಿರುವ ಎಲ್ಲ ಅಂದರೆ ಎಲ್ಲವೂ ಸದಾ ನಮ್ಮೊಂದಿಗೆ ಇರಬೇಕೆಂದು ಬಯಸುತ್ತೇವೆ. ಇತ್ತೀಚಿನ ದಿನ ಮಾನಗಳಲ್ಲಿ ಜಗತ್ತು ಹಿಂದೆಂದಿಗಿಂತಲೂ ಹೆಚ್ಚೆನಿಸುವಷ್ಟು ಬದಲಾವಣೆ ಕಂಡಿದೆ. ಮುಂದುವರೆದಿದೆ ಅಭಿವೃದಿಯತ್ತ ಸಾಗುತ್ತಿದೆ ಎನಿಸುತ್ತಿದೆ. ಅದು ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದ ಫಲ ಎಂದು ಬೇರೆ ಹೇಳಬೇಕಿಲ್ಲ. ಇವೆಲ್ಲ ನಮ್ಮ ಸೌಕರ್ಯಯುತ ಬದುಕಿಗೆ ಇಂಬು ಕೊಟ್ಟಿವೆ. ಬದಲಾವಣೆಯ ವೇಗಕ್ಕೆ ಹೊಂದಿಕೊಳ್ಳುವ ಭರದಲ್ಲಿ ಕಳೆದುಕೊಳ್ಳುತ್ತಿರುವುದನ್ನು ನಾವು ಗಮನಿಸುತ್ತಲೇ ಇಲ್ಲ. ಗಮನಿಸಿದರೂ ಅದೆಲ್ಲವನ್ನು ಸರಿಯಾಗಿಸಲು ಸಮಯವಿಲ್ಲವೆಂದು ಗೊಣುಗುತ್ತೇವೆ. ಪದೇ ಪದೇ ಅದೇ ಕೆಲಸಗಳಲ್ಲಿ ತೊಡಗಿ ಬದುಕಿನಲ್ಲಿ ನೆಮ್ಮದಿಯೇ ಇಲ್ಲ ಎಂದು ಷರಾ ಬರೆಯುತ್ತಿದ್ದೇವೆ. ಜೀವನೋತ್ಸಾಹವನ್ನು ಎತ್ತರಕ್ಕೇರಿಸುತ್ತಿದ್ದ ಎಲ್ಲ ಸಂಬಂಧಗಳು ಹಳಸಲಾಗುತ್ತಿವೆ. ಒಬ್ಬರಿಗೊಬ್ಬರು ಪೂರಕ ಹೋಗಿ ಕಿರಿಕಿರಿ ಎನಿಸುವ ಭಾವ ತುಂಬುತ್ತಿದೆ. ಭೌತಿಕ ಶ್ರೀಮಂತಿಕೆಯೇ ದೊಡ್ಡದೆಂದು ಮಾನಸಿಕ ನೆಮ್ಮದಿಯನ್ನು ತೊರೆದು ಧಿಮಾಕಿನಿಂದ ಮುನ್ನುಗ್ಗಲು ನೋಡುತ್ತಿದ್ದೇವೆ. ಬದುಕು ನಮ್ಮ ಅಶಾಂತ ಮನಸ್ಥಿತಿಗೆ ಕೊಡುವ ಏಟಿಗೆ ನಮ್ಮ ಬಾಯಿಂದ ಮಾತೇ ಹೊರಡುವುದಿಲ್ಲ. ಕಣ್ಣು ಕೆನ್ನೆಯನ್ನು ತೋಯಿಸುತ್ತದೆ ಅಷ್ಟೆ.
ಬದುಕು ಸಹ ಒಮ್ಮೆ ಹಚ್ಚಿದ ದೀಪದಂತೆ ಶಾಂತವಾಗಿ ಬೆಳಗುವುದು. ಅಚಾನಕ್ಕಾಗಿ ಹಚ್ಚಿದ ದೀಪ ಸಮಸ್ಯೆಗಳ ಗಾಳಿಗೆ ಆರಿ ಹೋಗುವುದು. ಇಲ್ಲಿ ಪ್ರತಿಯೊಂದಕ್ಕೂ ಬೆಲೆಯಿದೆ. ಶಾಂತಿ ನೆಮ್ಮದಿಗೆ ನೀಡಬೇಕಾದ ಬೆಲೆ ಹೆಚ್ಚಿದೆ ಎಂದು ಗೋಳಾಡುತ್ತೇವೆ. ವಾಸ್ತವದಲ್ಲಿ ಸರಳತೆಯು ಶಾಂತಿ ಮತ್ತು ನೆಮ್ಮದಿಗೆ ಮೂಲ ಅಂಶ. ಆದರೆ ಸರಳವಾಗಿರುವುದೇ ನಮಗೆ ಕಠಿಣವಾಗಿ ಬಿಟ್ಟಿದೆ.
ಹತ್ತಾರು ಬಣ್ಣಗಳಿಂದ ಕೂಡಿದ ಬದುಕಿನ ಭಿತ್ತಿಯ ಚಿತ್ರಕ್ಕೆ ಕೇವಲ ಭೌತಿಕ ಸಿರಿವಂತಿಕೆ ಬಣ್ಣ ಬಳೆಯಲು ಯತ್ನಿಸುತ್ತಿದ್ದೇವೆ. ಆಸೆಯೆಂಬ ಲಗಾಮಿಲ್ಲದ ಕುದುರೆಯ ಚಿತ್ತವನ್ನು ಒಂದೇ ಒಂದು ಬಣ್ಣ ಬಳಸಿ ಇದು ವರ್ಣ ರಂಜಿತವಾಗಿ ಕಾಣುತ್ತಿಲ್ಲವೆಂದು ಬಡಬಡಿಸುತ್ತೇವೆ. ಕೆಲವರಂತೂ ತಾಳಲಾರದೇ ಬೊಬ್ಬಿಡುತ್ತಿದ್ದಾರೆ, ಭಾವನಾತ್ಮಕ ಸಂಸ್ಕೃತಿ ಸಂಪ್ರದಾಯ ಆರೋಗ್ಯ ಸಾಮಾಜಿಕ ಸ್ಥಿರತೆಯ ಬಣ್ಣಗಳತ್ತ ಚಿತ್ತ ಹರಿಸದೇ ಹಾಳಾಗುತ್ತಿದ್ದೇವೆ. ಈ ಎಲ್ಲ ಬಣ್ಣಗಳು ಬದುಕಿನ ಬೆಲೆ ಎಷ್ಟು? ನಮ್ಮ ಯೋಗ್ಯತೆ ಎಷ್ಟು ಎಂಬುದನ್ನು ನಿರ್ಧರಿಸುತ್ತವೆ. ಜೀವನದ ಚಿತ್ರಕ್ಕೆ ಸಂಪೂರ್ಣ ಅಂದ ಚೆಂದ ಕಡಿಮೆ ಆಗುವ ಮುನ್ನ ಬುದ್ಧಿವಂತ ಕಲಾವಿದರಾಗಿರುವ ನಾವು ಹೃದಯವಂತರಾಗಬೇಕಿದೆ. ಪ್ಯಾಬ್ಲೋ ಪಿಕಾಸೋ ಹೇಳಿದಂತೆ ಹೃದಯವಂತನಾಗದಿದ್ದರೆ ಕಲಾವಿದನಾಗಲು ಸಾಧ್ಯವಿಲ್ಲ, ನಮ್ಮೊಳಗೆಲ್ಲ ಒಬ್ಬ ಸೊಗಸಾದ ಕಲಾವಿದನಿದ್ದಾನೆ. ಆತ ಬಿಡಿಸುವ ಚಿತ್ರ ಎಲ್ಲ ಬಣ್ಣಗಳಿಂದ ಕೂಡಿದರೆ ಬದುಕಿನಲ್ಲಿ ಸುಖ ಶಾಂತಿ ನೆಮ್ಮದಿಯ ಹೊಳೆ ಹರಿಯುವುದು ಖಚಿತ.

(ಲೇಖಕರು – ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button