*ಬೆಂಗಳೂರಿಗೆ ತೆರಳುತ್ತಿದ್ದ ಟೆಕ್ಕಿ ಅಪಘಾತದಲ್ಲಿ ಸಾವು*: *ಕುಟುಂಬದ ಏಕೈಕ ಆಸರೆ ಕಳೆದುಕೊಂಡ ಪೋಷಕರು*

ಪ್ರಗತಿವಾಹಿನಿ ಸುದ್ದಿ: ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬೈಕ್ನಲ್ಲಿ ತೆರಳುತ್ತಿದ್ದ ಪ್ರತಿಭಾವಂತ ಯುವಕನ ಬದುಕು ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದೆ. ಉತ್ತಮ ವಿದ್ಯಾಭ್ಯಾಸ ಪಡೆದು ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಯುವಕ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಇದ್ದೊಬ್ಬನೆ ಮಗನನ್ನು ಕಳೆದುಕೊಂಡ ಪೋಷಕರು ಕಂಗಾಲಾಗಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಚುಂಗಿಗುಡ್ಡೆ ನಿವಾಸಿ ನಾರಾಯಣ ಹೆಬ್ಬಾರ್ ಅವರ ಪುತ್ರ ಅಕ್ಷಯ್ ಎನ್. ಹೆಬ್ಬಾರ್ (26) ಮೃತ ದುರ್ದೈವಿ. ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದ ಅಕ್ಷಯ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ವರ್ಕ್ ಫ್ರಮ್ ಹೋಮ್ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದ ಅಕ್ಷಯ್ ತಿಂಗಳಿಗೊಮ್ಮೆ ಕಚೇರಿಗೆ ಭೇಟಿ ನೀಡಲು ಬೆಂಗಳೂರಿಗೆ ತೆರಳುತ್ತಿದ್ದ.
ಟ್ರಕ್ಗೆ ತಾಗಿ ನಿಯಂತ್ರಣ ತಪ್ಪಿದ ಬೈಕ್
ಭಾನುವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಮನೆಯಿಂದ ಬೈಕ್ನಲ್ಲಿ ಬೆಂಗಳೂರಿಗೆ ಅಕ್ಷಯ್ ಹೊರಟ್ಟಿದ್ದರು. ಪ್ರಯಾಣದ ನಡುವೆ ಅಪಘಾತ ಸಂಭವಿಸುವುದಕ್ಕೂ ಮುನ್ನ ತಾಯಿಗೆ ದೂರವಾಣಿ ಕರೆ ಮಾಡಿದ್ದರು ಎನ್ನಲಾಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಮೀಪ ಟ್ರಕ್ಗೆ ಬೈಕ್ನ ಹ್ಯಾಂಡಲ್ ಭಾಗ ತಾಗಿ, ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ದುರ್ಘಟನೆ ಸಂಭವಿಸಿದೆ.
ಅಕ್ಷಯ್ ಸೌಮ್ಯ ಸ್ವಭಾವದ ಯುವಕನಾಗಿದ್ದು, ಕುಟುಂಬದವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಪ್ರತಿದಿನ ಸಂಜೆ ತಾಯಿಯೊಂದಿಗೆ ಚುಂಗಿಗುಡ್ಡೆ ರಸ್ತೆಯಲ್ಲಿ ವಾಕಿಂಗ್ ಮಾಡುವುದು ಅವರ ದಿನಚರಿಯಾಗಿತ್ತು. ತಂದೆ-ತಾಯಿಯ ಏಕೈಕ ಮಗನಾಗಿದ್ದ ಅಕ್ಷಯ್ ಕುಟುಂಬದ ಬಹುದೊಡ್ಡ ಭರವಸೆಯಾಗಿದ್ದರು.
ತಂದೆ ನಾರಾಯಣ ಹೆಬ್ಬಾರ್ ಎಲ್ಐಸಿ ಏಜೆಂಟ್ ಆಗಿದ್ದು, ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ಉತ್ತಮವಾಗಿ ಓದಿ ಉದ್ಯೋಗ ಪಡೆದು ಪೋಷಕರ ಕನಸುಗಳಿಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬದ ದುಃಖ ಮುಗಿಲು ಮುಟ್ಟಿದೆ. ಅಕ್ಷಯ್ ಅವರ ನಿಧನದಿಂದ ಚುಂಗಿಗುಡ್ಡೆ ಹಾಗೂ ಪಡುಕೋಣೆ ಪರಿಸರದಲ್ಲಿ ಶೋಕದ ಛಾಯೆ ಆವರಿಸಿದೆ.




