ಪ್ರಗತಿವಾಹಿನಿ ಸುದ್ದಿ, ಡೆಹ್ರಾಡೂನ್: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಸುಮಾರು 16,000 ಅಡಿ ಎತ್ತರದಲ್ಲಿ ಸರೋವರವೊಂದನ್ನು 20 ರ ಹರೆಯದ ಆರು ಚಾರಣಿಗರ ತಂಡವೊಂದು ಪತ್ತೆ ಮಾಡಿದೆ.
ವರ್ಷದ ಹಿಂದೆ ದೇಶಾದ್ಯಂತ ಕೋವಿಡ್ ತಾಂಡವಾಡುತ್ತಿದ್ದ ವೇಳೆ ಚಾರಣಕ್ಕೆ ತೆರಳುವ ನಿರ್ಧಾರವನ್ನು ಈ ಯುವಕರು ಕೈಗೊಂಡಿದ್ದರು. ಇದಕ್ಕಾಗಿ ಅವರು ಗೂಗಲ್ ಅರ್ಥ್ ನಲ್ಲಿ ಸ್ಥಳ ಜಾಲಾಡುತ್ತಿದ್ದಾಗ ತಂಡದ ಒಬ್ಬ ಸದಸ್ಯ ಈ ಸರೋವರವನ್ನು ಗುರುತಿಸಿದ್ದ ಎಂದು ಚಾರಣಿಗರಲ್ಲಿ ಒಬ್ಬರಾದ ಅಭಿಷೇಕ ಪನ್ವಾರ್ ಹೇಳಿದ್ದಾರೆ.
ಆಗಸ್ಟ್ 27 ರಂದು ಗೌಂಡರ್ ಎಂಬ ಹಳ್ಳಿಯಿಂದ ಮದ್ಮಹೇಶ್ವರ ಧಾಮದವರೆಗೆ 11 ಕಿಲೋಮೀಟರ್ ಕಡಿದಾದ ಏರಿಳಿತಗಳನ್ನು ಕ್ರಮಿಸಿದ ತಂಡ, ಮದ್ಮಹೇಶ್ವರವನ್ನು ಬೇಸ್ ಕ್ಯಾಂಪ್ ಎಂದು ಪರಿಗಣಿಸಿ, ಬರೊಬ್ಬರಿ ಆರನೇ ದಿನ ಸರೋವರದ ತಟವನ್ನು ತಲುಪಿತು.
ಹವಾಮಾನದ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುತ್ತ ಹೋದ ತಂಡ ಸೆಪ್ಟೆಂಬರ್ 1 ರಂದು ಸರೋವರವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. 25 ನಿಮಿಷಗಳ ಸಮಯವನ್ನು ಸರೋವರದ ತಟದಲ್ಲಿ ಕಳೆದು ಅಲ್ಲಿ ಫೋಟೊಗ್ರಾಫಿ, ವಿಡಿಯೋ ಚಿತ್ರೀಕರಣಗಳನ್ನು ನಡೆಸಿದ ತಂಡ ಸರೋವರದ ವ್ಯಾಪ್ತಿಯನ್ನು ಕೂಡ ನಿಖರವಾಗಿ ಅಳತೆ ಮಾಡಿದೆ.
“ಸರೋವರಕ್ಕೆ ಚಾರಣ ಜೀವಮಾನದ ಅನುಭವವಾಗಿದೆ. ಸುಂದರವಾದ ಹಸಿರು ಹುಲ್ಲುಗಾವಲುಗಳು ಮತ್ತು ಬಿಳಿಯ ಹಿಮನದಿಗಳು ಕಣ್ಣಿಗೆ ರಸದೌತಣ ನೀಡುತ್ತವೆ. ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ಟ್ರೆಕ್ಕಿಂಗ್ ಗುಂಪುಗಳು ಇಲ್ಲಿಗೆ ಬರುವವೆಂದು ಭಾವಿಸಿದ್ದೇವೆ” ಎಂದು ತಂಡದ ಸದಸ್ಯ ಅಭಿಷೇಕ ಹೇಳಿದ್ದಾರೆ.
ಇದೇ ವೇಳೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಕೂಡ ಈ ಸರೋವರ ಕುರಿತ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಎರಡೇ ತಾಸುಗಳ ಅವಧಿಯಲ್ಲಿ ಆತ್ಮಹತ್ಯೆಗೆ ಶರಣಾದ ಇಬ್ಬರು ಬಾಲ್ಯಸ್ನೇಹಿತೆಯರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ