Kannada NewsKarnataka News

ಯುವ ಜನತೆ ಅತಿಯಾಗಿ ತಂತ್ರಜ್ಞಾನಗಳ ದಾಸರಾಗಿದ್ದಾರೆ -ಡಾ.ಕೋರೆ ವಿಷಾದ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಯುವಕರು ದೇಶದ ಆಸ್ತಿ. ಅವರು ಸದೃಢರಾಗಿದ್ದರೆ ಇನ್ನೂ ಸಂತೋಷಕರವೆಂದು ಕೆ ಎಲ್ ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ಶಾಸಕ ಅಭಯ ಪಾಟೀಲ ಅವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಾಕಥಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ವಿಶ್ವದಲ್ಲೆ ೨ನೇ ಅಧಿಕ ಜನಸಂಖ್ಯೆಯನ್ನು ಹೊಂದಿರುವುದು ನಮ್ಮ ಭಾರತದೇಶ. ಅದರಂತೆ ಅಧಿಕ ಯುವಜನತೆಯನ್ನೂ ಕೂಡ ಹೊಂದಿದೆ. ಆದರೆ ಇಂದು ಪೌಷ್ಟಿಕಾಂಶಗಳು, ಜೀವಸತ್ವಗಳ ಕೊರತೆ, ದೈಹಿಕ ಚಟುವಟಿಕೆಗಳ ಜ್ಞಾನದ ಅಭಾವ, ಅತಿಯಾಗಿ ತಂತ್ರಜ್ಞಾನಗಳ ದಾಸರಾಗಿರುವುದರಿಂದ ಸದೃಢರಾಗಿರದೇ ಇರುವುದು ನಿಜಕ್ಕೂ ವಿಷಾದವೆನ್ನಿಸುತ್ತದೆ. ಆದ್ದರಿಂದ ಯುವಶಕ್ತಿ ಈ ಎಲ್ಲ ವಿಷಯಗಳನ್ನು ಮೆಟ್ಟಿನಿಂತು ದೇಶಕ್ಕೆ ಬಲವಾಗಿರಿ ಎಂದು ಕರೆ ನೀಡಿದರು.
ನಂತರ ಮಾತನಾಡಿದ ದಕ್ಷಿಣಬೆಳಗಾವಿಯ ಶಾಸಕ ಅಭಯ ಪಾಟೀಲ,  ಪ್ರಧಾನ ಮಂತ್ರಿಯವರು ನುಡಿದ ಹಾಗೆ ಸ್ವಚ್ಚತೆ ಹಾಗೂ ಪ್ಲಾಸ್ಟಿಕ್ ಮುಕ್ತ ಸಮಾಜವು ಆರೋಗ್ಯ ಪೂರ್ಣ ಜೀವನ ಸಾಗಿಸಲು ರಹದಾರಿಯಾಗಿದೆ. ಆದ್ದರಿಂದ ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳೋಣ ಹಾಗೂ ಪ್ಲಾಸ್ಟಿಕ್ ಉಪಯೋಗಿಸುವುದನ್ನು ಈಗಿನಿಂದಲೇ ನಿರ್ಬಂಧಿಸೋಣವೆಂದು ಕರೆ ನೀಡಿದರು.

ನಂತರ ಮಾತನಾಡಿದ ಜಿಲ್ಲಾ ಹಿರಿಯ ನಾಗರಿಕ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ ಕುಲಕರ್ಣಿ ಮಾತನಾಡುತ್ತ, ನಡಿಗೆಯು ನಮಗೆ ಅತ್ಯಂತ ಸರಳವಾಗಿ ಆರೋಗ್ಯವನ್ನು ಕಾಪಾಡುವಂತಹ ಸಾಧನವಾಗಿದೆ. ವಾಹನಗಳ ದಾಸರಾಗದೇ ಆದಷ್ಟು ನಡಿಗೆಯನ್ನು ರೂಢಿಗೆ ತನ್ನಿರಿ. ಇದರಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಗಳೆರಡೂ ಸುಸ್ಥಿತಿಯಲ್ಲಿರುತ್ತವೆ ಎಂದು ತಿಳುವಳಿಕೆ ನೀಡಿದರು.
  ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್ ಸಿ ಧಾರವಾಡ ಸ್ವಾಗತಿಸಿದರು. ಕಾರ್ಯಕ್ರಮ ನಗರದ ಟಿಳಕವಾಡಿಯ ಲೆಲೆ ಮೈದಾನದಿಂದ ಪ್ರಾರಂಭಗೊಂಡು ೨ನೇ ರೈಲ್ವೇ ಗೇಟ್ ಮೂಲಕ ಆರ್‌ಪಿಡಿ ವೃತ್ತದ ಮುಖೇನ ಗೋಮಟೇಶ ಶಾಲೆಯ ಎದುರಿನಿಂದ ಯಳ್ಳೂರ ಕ್ರಾಸ್ ಮೂಲಕ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯನ್ನು ತಲುಪಿತು. ಕಾರ್ಯಕ್ರಮದಲ್ಲಿ ಒಂದು ಸಾವಿರಕ್ಕೂ ಅಧಿಕ ನಾಗರಿಕರು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button