Latest

ಅತೃಪ್ತರ ಸಮಾಧಾನಕ್ಕೆ ಖುದ್ದು ಆಖಾಡಕ್ಕಿಳಿದ ಸಿಎಂ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಎಚ್.ಡಿ.  ಕುಮಾರಸ್ವಾಮಿ ಅವರು ಇಂದು ಕಾಂಗ್ರೆಸ್‌ನ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಬಿ.ನಾಗೇಂದ್ರ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

Home add -Advt

ರಮೇಶ ಜಾರಕಿಹೊಳಿ ಮನೆಗೆ ಸ್ವತಃ ತೆರಳಿದ ಸಿಎಂ, ಮೂವರೊಂದಿಗೂ ಮಾತನಾಡಿ ಅವರ ಅಸಮಾಧಾನ ಪರಿಹರಿಸುವ ಜವಾಬ್ದಾರಿ ವಹಿಸಿಕೊಂಡರು. ನಿಮ್ಮ ಸಮಸ್ಯೆಯನ್ನು ನಾನು ಪರಿಹರಿಸುತ್ತೇನೆ. ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಿಎಂ ಕೋರಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಅವರ ಅತೃಪ್ತ ಶಾಸಕರನ್ನು ಸಮಾಧಾನಪಡಿಸುವ ಜವಾಬ್ದಾರಿಯನ್ನು ಕಾಂಗ್ರೆಸ್ ತೆಗೆದುಕೊಳ್ಳಬೇಕು. ಆದರೆ ಮುಖ್ಯಮಂತ್ರಿಯಾಗಿ ನನ್ನ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತಿದ್ದೇನೆ ಎಂದರು.

ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ, ಕಾಂಗ್ರೆಸ್‌ ಮೇಲೆ ಅಸಮಾಧಾನ ಇದೆ. ಆದರೆ ನಾವು ಪಕ್ಷ ಬಿಡುವುದಿಲ್ಲ ಎಂದರು.

ರಾಜ್ಯ ಕಾಂಗ್ರೆಸ್ ಬಗ್ಗೆ ನಮಗೆ ಇರುವ ಅಸಮಾಧಾನವನ್ನು ಹೈಕಮಾಂಡ್‌ಗೆ ಹೇಳಿದ್ದೇವೆ, ಆದರೆ ಅಲ್ಲಿಂದ ನಮಗೆ ಇನ್ನೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದ ಅವರು ಉಮೇಶ್ ಜಾಧವ್ ರಾಜೀನಾಮೆಗೂ ನಮಗೂ ಯಾವುದೇ ಸಂಬಂಧವಿಲ್ಲ, ನಾವು ಆ ದಾರಿ ತುಳಿಯುವುದಿಲ್ಲ ಎಂದು ಹೇಳಿದರು.
ಮತ್ತೊಬ್ಬ ಅತೃಪ್ತ ಶಾಸಕ ಬಿ.ನಾಗೇಂದ್ರ ಮಾತನಾಡಿ, ಕಾಂಗ್ರೆಸ್‌ ಜೊತೆ ಅಸಮಾಧಾನವಿದೆ. ಆದರೆ ಆಡಳಿತದ ಬಗ್ಗೆ ಅತೃಪ್ತಿ ಎಲ್ಲ. ಇಂದಿನ ಸಭೆಯಲ್ಲಿ ಸಿಎಂ ಅವರೊಂದಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದೆವು. ಮುಖ್ಯಮಂತ್ರಿಯವರು ಬೆಳಗಾವಿ, ಬಳ್ಳಾರಿ ಜಿಲ್ಲೆಗಳ ಸಮಸ್ಯೆಗೆ ನಾನೇ ಖುದ್ದಾಗಿ ಸ್ಪಂದನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ನಮ್ಮ ಮನವಿಗೆ ಸ್ಪಂದಿಸುವ ವಿಶ್ವಾಸವಿದೆ ಎಂದರು.

ನನ್ನ ಸಹೋದರ ವೆಂಕಟೇಶ್ ಪ್ರಸಾದ್ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧೆ ಮಾಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರ ನಿರ್ಧಾರ ಅವರದ್ದು, ಆದರೆ ನಾನು ಬಿಜೆಪಿಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಹೇಶ್ ಕುಮಟಳ್ಳಿ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ತ್ಯಜಿಸುವುದಿಲ್ಲ.  ಸಿದ್ದರಾಮಯ್ಯ ಅವರ ಬಳಿಯೂ ನಾವು ಅಸಮಾಧಾನ ತೋಡಿಕೊಂಡಿದ್ದೇವೆ ಎಂದು ಹೇಳಿದರು.

Related Articles

Back to top button