Latest

ಅಶಿಸ್ತು: ಅಸಮಾಧಾನಿತರಿಗೆ ಕಾಂಗ್ರೆಸ್ ಎಚ್ಚರಿಕೆ; ರಮೇಶ್ ನಡೆ ಇನ್ನೂ ನಿಗೂಢ

 

 

 

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಸಚಿವಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಶಾಸಕರು ಅಶಿಸ್ತು ತೋರಿದರೆ ಪಕ್ಷ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ಎಚ್ಚರಿಸಿದೆ.

ರಾಜ್ಯಾಧ್ಯಕ್ಷ ದಿನೇಶ ಗುಂಡೂರಾವ್ ಈ ಕುರಿತು ಹೇಳಿಕೆ ನೀಡಿದ್ದು, ರಮೇಶ ಜಾರಕಿಹೊಳಿ ಸೇರಿದಂತೆ ಯಾರೇ ಪಕ್ಷದ ವಿರುದ್ಧ ಅಶಿಸ್ತಿನಿಂದ ವರ್ತಿಸಿದರೆ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದಿದ್ದಾರೆ. ಈ ಸಂಬಂಧ ವಿ.ಆರ್.ಸುದರಶನ ನೇತೃತ್ವದಲ್ಲಿ ಶಿಸ್ತು ಸಮಿತಿಯನ್ನೂ ರಚಿಸಲಾಗಿದೆ. 

ಈ ಮಧ್ಯೆ ತಾವು 2-3 ದಿನದಲ್ಲಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದು ಖಚಿತ ಎಂದಿರುವ ರಮೇಶ ಜಾರಕಿಹೊಳಿ, ಮುಂದಿನ ನಿರ್ಧಾರವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಹೇಳಿದ್ದಾರೆ. ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ, ಈ ಸಂಬಧ ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತನಾಡುವುದಿಲ್ಲ ಎಂದೂ ಹೇಳಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ಮಧ್ಯಮದವರ ಮೇಲೆ ತೀವ್ರ ಸಿಡಿಮಿಡಿಗೊಂಡ ರಮೇಶ್, ಒಂದು ಹಂತದಲ್ಲಿ ನೀವೇ ಸಮಾಜದ್ರೋಹಿಗಳು ಎಂದೂ ದೂರಿದರು. ಮಾಧ್ಯಮದವರು ಹಿರೋಗಳನ್ನು ವಿಲನ್ ಗಳಾಗಿ, ವಿಲನ್ ಗಳನ್ನು ಹೀರೋಗಳಾಗಿ ಬಿಂಬಿಸುತ್ತಿದ್ದೀರಿ. ನನ್ನನ್ನು ಪ್ರಶ್ನಿಸಲು ನೀವ್ಯಾರು ಎಂದೆಲ್ಲ ಕಿಡಿಕಾರಿದ್ದಾರೆ.

ಸಚಿವಸ್ಥಾನ ತಪ್ಪಿರುವ ಹಿರಿಯ ನಾಯಕ ರಾಮಲಿಂಗರೆಡ್ಡಿ ಬೆಂಬಲಿಗರು ಕೂಡ ಪಕ್ಷದ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುವುದಾಗಿ ಬೆದರಿಕೆ ಹಾಕಿದ್ದಾರೆ. ರಾಮಲಿಂಗ ರೆಡ್ಡಿ ಪರವಾಗಿ ಕಾಂಗ್ರೆಸ್ ನಾಯಕರಿಗೆ 10 ಪ್ರಶ್ನೆಗಳನ್ನು ಸಹ ಕೇಳಲಾಗಿದೆ. 

ಒಟ್ಟಾರೆ, ಅಸಮಾಧಾನಿತ ನಾಯಕರ ನಡೆ ಸಮ್ಮಿಶ್ರ ಸರಕಾರಕ್ಕೆ ಕಂಟಕ ಉಂಟು ಮಾಡುತ್ತದೆಯೋ, ಸರಕಾರ ಅವರನ್ನೆಲ್ಲ ಸಮಾಧಾನಪಡಿಸಲಿದೆಯೋ ಕಾದು ನೋಡಬೇಕಿದೆ. 

ಈ ಮಧ್ಯೆ ಬಿಜೆಪಿ ಸಂಪುಟ ವಿಸ್ತರಣೆ ನಂತರ ಮೌನವಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮೌನದ ಸೂಚನೆ ಏನು ಎನ್ನುವ ಪ್ರಶ್ನೆಯೂ ಎದ್ದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button