Latest

ಆಗ ಜಾರಕಿಹೊಳಿ ಚೆನ್ನಾಗಿಯೇ ಉಸಿರಾಡುತ್ತಿದ್ದರು -ಡಿಕೆಶಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ. ನನ್ನನ್ನು ಭೇಟಿ ಮಾಡಿದಾಗ ಅವರು ಚೆನ್ನಾಗಿಯೇ ಉಸಿರಾಡುತ್ತಿದ್ದರು. ಮತ್ತೆ ಅವರು ಸಿಕ್ಕಾಗ ಯಾವ ಉಸಿರುಗಟ್ಟಿದೆ ಎಂಬುದನ್ನು ಕೇಳುತ್ತೇನೆ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ತೊರೆಯುವ ಬಗ್ಗೆ ರಮೇಶ್ ಜಾರಕಿಹೊಳಿ ಅವರು ಮಾತನಾಡಿದ ವಿಚಾರವಾಗಿ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಚಿವರು, 
‘ಭಗವಂತ ರಮೇಶ್ ಜಾರಕಿಹೊಳಿಗೆ ಒಳ್ಳೆಯದನ್ನು ಮಾಡಲಿ. ಈ ವಿಚಾರವಾಗಿ ಪಕ್ಷದ ನಾಯಕರು, ಜಿಲ್ಲಾ ಉಸ್ತುವಾರಿ ಸಚಿವರು, ಅವರ ಸಹೋದರ ಮಾತನಾಡುತ್ತಾರೆ. ನನ್ನ ಕೈಗೆ ಅವರು ಸಿಕ್ಕರೆ ಮಾತುಕತೆ ನಡೆಸಲು ಸಿದ್ಧನಿದ್ದೇನೆ ಎಂದರು.
ರಮೇಶ್ ಜಾರಕಿಹೊಳಿ ನನ್ನ ಒಳ್ಳೆಯ ಸ್ನೇಹಿತರು. ರಾಹುಲ್ ಗಾಂಧಿ ಅವರು ಬಹಳ ಹೆಮ್ಮೆ, ಗೌರವದಿಂದ ಅವರನ್ನು ಮಂತ್ರಿ ಮಾಡಿದ್ದರು. ರಮೇಶ್ ಜಾರಕಿಹೊಳಿ ಹಿರಿಯರು, ಬುದ್ದಿವಂತರಿದ್ದಾರೆ. ಕಳೆದ ಬಾರಿ ನಾನು ಅವರನ್ನು ಭೇಟಿಯಾಗಿದ್ದಾಗ ಯಾವ ಉಸಿರುಗಟ್ಟಿದೆ ಎಂದು ಹೇಳಿಲ್ಲ. ಅವರು ಚೆನ್ನಾಗಿಯೇ ಉಸಿರಾಡುತ್ತಿದ್ದರು. ಅವರಿಗೆ ಏನು ಉಸಿರುಗಟ್ಟಿದೆ ಎಂದು ನನಗೆ ಗೊತ್ತಿಲ್ಲ. ಒಂದು ವೇಳೆ ನಾನು ಅವರನ್ನು ಭೇಟಿಯಾದರೆ ಈ ಬಗ್ಗೆ ಅವರ ಬಳಿ ಕೇಳುತ್ತೇನೆ.’ ಎಂದು ಡಿಕೆಶಿ ವ್ಯಂಗ್ಯವಾಡಿದರು.
ಎಲ್ಲ ಕಾಂಗ್ರೆಸ್- ದಳದ ಶಾಸಕರು ಬಿಜೆಪಿ ಜತೆಗಿದ್ದಾರೆ!
ಇನ್ನು ಮುಂದಿನ ತಿಂಗಳು 23ರ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವರು,  ‘ಬಿಜೆಪಿಯವರು ದಡ್ಡರಿದ್ದಾರೆ. ಅವರ ಬಳಿ ಕೇವಲ 20 ಜನ ಕಾಂಗ್ರೆಸ್ ಶಾಸಕರು ಮಾತ್ರ ಇಲ್ಲ. ಕಾಂಗ್ರೆಸ್ ನ ಎಲ್ಲ 78, ಜೆಡಿಎಸ್ ನ ಎಲ್ಲ ಶಾಸಕರು ಬಿಜೆಪಿಯವರ ಜೊತೆ ವಿಶ್ವಾಸದೊಂದಿಗೆ ಇದ್ದಾರೆ. ಇಲ್ಲಿ ಸಂಸಾರ ಒಂದೇ, ಅವರು ಅವರ ಮನೇಲಿ ಮಾಡ್ತಾರೆ. ನಾವು ನಮ್ಮನೇಲಿ ಮಾಡ್ತೀವಿ. ನಾವು ರಾಜಕಾರಣ‌ವನ್ನು ಅವರೊಂದಿಗೆ ಮಾಡಲೇಬೇಕಲ್ಲ. ಗಂಟೆ, ಗಡುವು ಕೊಡ್ತಾ ಇರ್ತಾರೆ. ಕೊಡ್ಲಿ ಬಿಡಿ. ನಾವು ಹಳ್ಳಿಯಿಂದ ಬಂದಿದ್ದೇವೆ. ಜನರೇ ನಮ್ಮ ಆಸ್ತಿ’ ಎಂದರು.
ಗಣೇಶ್ ಗೆ ಮತ್ತೆ ಕೆಟ್ಟ ಘಳಿಗೆ ಬರದಿರಲಿ!
ಇನ್ನು ಕಂಪ್ಲಿ ಶಾಸಕ ಗಣೇಶ್ ಅವರ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವರು, ‘ಕಂಪ್ಲಿ ಶಾಸಕ ಗಣೇಶ್ ಅವರ ವಿಚಾರದಲ್ಲಿ ಪಾಪ ತಪ್ಪಾಗಿದೆ. ಅವರು ಬಹಳ ನೋವು ಅನುಭವಿಸಿದ್ದಾರೆ. ಮುಂದೆ ಅವರಿಗೆ ಕೆಟ್ಟ ಘಳಿಗೆ ಬರದಿರಲಿ. ಆನಂದ ಸಿಂಗ್ ಹಾಗೂ ಗಣೇಶಗೆ ಕೆಟ್ಟ ಘಳಿಗೆ ಬಂದಿತ್ತು. ಈಗ ಅದರಿಂದ ಹೊರಬಂದಿದ್ದಾರೆ’ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button