ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಆದರ್ಶ ವಿದ್ಯಾಲಯಗಳು ಹೆಸರಿಗೆ ತಕ್ಕಂತೆ ಆದರ್ಶ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಬೇಕು. ಇದು ಆಯಾ ಶಾಲೆಗಳ ಮುಖ್ಯೋಪಾಧ್ಯಾಯರ ಮುಖ್ಯ ಕರ್ತವ್ಯವಾಗಿದೆ ಎಂದು ರಾಜ್ಯ ಯೋಜನಾ ನಿರ್ದೇಶಕ ಡಾ. ಎಮ್. ಟಿ. ರೇಜು ಹೇಳಿದರು.
ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಬೆಳಗಾವಿ ಹಾಗೂ ಕಲ್ಬುರ್ಗಿ ವಿಭಾಗಮಟ್ಟದ ಆದರ್ಶವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿಅವರು ಮಾತನಾಡಿದರು.
ಎಲ್ಲ ಶಾಲೆಗಳು ಎಸ್ ಎಸ್ಎಲ್ ಸಿ ಉತ್ತಮ ಫಲಿತಾಂಶವನ್ನು ನೀಡುವುದರೊಂದಿಗೆ ಶಿಕ್ಷಣ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಮಕ್ಕಳಲ್ಲಿ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳೊಂದಿಗೆ ಕ್ರೀಯಾಶೀಲತೆ ತುಂಬುವುದು ಮತ್ತು ಆದರ್ಶ ಶಾಲೆಯ ಆಲ್ಯೂಮಿನಿ ಸಂಘ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳವುದು ಪ್ರತಿಯೊಬ್ಬ ಮುಖ್ಯೋಪಾಧ್ಯಾಯರ ಹೊಣೆ ಎಂದು ಅವರು ಹೇಳಿದರು.
ರಾಜ್ಯ ಯೋಜನಾ ನಿರ್ದೇಶಕರ ಆಯೋಗ, ಸಮಗ್ರ ಶಿಕ್ಷಣ ಅಭಿಯಾನ ಬೆಂಗಳೂರು ವತಿಯಿಂದ ಆಯೋಜಿಸಲಾಗಿತ್ತು.
ಈ ಸಭೆಗೆ ಬೆಳಗಾವಿ ಹಾಗೂ ಕಲ್ಬುರ್ಗಿ ವಿಭಾಗದ 18 ಜಿಲ್ಲೆಗಳಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪಯೋಜನಾ ಸಮನ್ವಯಾಧಿಕಾರಿಗಳು ಹಾಗೂ ಎಲ್ಲ ಆದರ್ಶ ವಿದ್ಯಾಲಯಗಳ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ಆದರ್ಶ ವಿದ್ಯಾಲಯಗಳಲ್ಲಿನ ಕುಂದುಕೊರತೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರಗಳನ್ನು ಡಾ. ಎಮ್. ಟಿ. ರೇಜು ಸೂಚಿಸಿದರು.
ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ. ಬಿ. ಪುಂಡಲಿಕ ಸ್ವಾಗತಿಸಿದರು. ಸಮಗ್ರ ಶಿಕ್ಷಣ ಅಭಿಯಾನದ ಕಾರ್ಯಕ್ರಮಾಧಿಕಾರಿ ರವಿ ಕುಮಾರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಣಾಧಿಕಾರಿ ಎ. ಎನ್. ಪ್ಯಾಟಿ ವಂದಿಸಿದರು. ಸರಸ್ವತಿ ದೇಸಾಯಿ ನಿರೂಪಿಸಿದರು. ಬೆಳಗಾವಿ ಸಮಗ್ರ ಶಿಕ್ಷಣ ಅಭಿಯಾನದ ಉಪಯೋಜನಾಧಿಕಾರಿ ಕೆ. ಎಸ್. ನಂದೇರ ಹಾಗೂ ಎಸ್. ಡಿ. ನದಾಪ, ಸಹನಿರ್ದೇಶಕ ಕೆ. ಎಸ್. ಕರಿಚನ್ನವರ, ಚಿಕ್ಕೋಡಿ ಉಪನಿರ್ದೇಶಕ ಎಸ್. ಜೆ. ದಾಸರ, ಶಾಲೆಯ ಮುಖ್ಯೋಪಾಧ್ಯಾಯ ಎಮ್. ಕೆ. ಮಾದಾರ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ