ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ಆರ್ ಟಿಓ ವೃತ್ತದ ಬಳಿ ಸಣ್ಣ ಅಪಘಾತವೊಂದರ ಹಿನ್ನೆಲೆಯಲ್ಲಿ ಯುವಕರ ಗುಂಪೊಂದು ಕಾರು ಚಾಲಕನ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದಿದೆ.
ಹುಬ್ಬಳ್ಳಿಯ ಗೋಪಿನಾಥ ಭರತರಾಜ ಪೂಜಾರಿ ಹಲ್ಲೆಗೊಳಗಾದ ವ್ಯಕ್ತಿ. ಪ್ರಕರಣ ಸಂಬಂಧ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಮೀವುಲ್ಲಾ ಹಸನ ಸಾಬ್ ಖಲೀಫ್ ಎನ್ನುವವನನ್ನು ಬಂಧಿಸಿ ಸೆಕ್ಷನ್ 307ರ ಪ್ರಕಾರ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ 2.15 ಕ್ಕೆಈ ಘಟನೆ ನಡೆದಿದೆ. ಹುಬ್ಬಳ್ಳಿಯಿಂದ ವಿಹಿಂಪ ಕೇಂದ್ರೀಯ ಸತ್ಸಂಗ ಪ್ರಮುಖ ವಸಂತಕುಮಾರ ರಥ್ ಹಾಗೂ ವಿಹಿಂಪ ಕೇಂದ್ರೀಯ ಸಹ ಸತ್ಸಂಗ ಪ್ರಮುಖ ದಾದಾ ವೇದ ಕಲೆ ಕಾರಿನಲ್ಲಿ ಬೆಳಗಾವಿಗೆ ಆಗಮಿಸಿದ್ದರು. ಗೋಪಿನಾಥ ಕಾರು ಚಾಲನೆ ಮಾಡುತ್ತಿದ್ದರು. ಆರ್ ಟಿಓ ಕಚೇರಿ ಬಳಿ ಬಂದಾಗ ಬೈಕ್ ಒಂದು ಇವರ ಕಾರಿಗೆ ಗುದ್ವಾದಿದೆ. ಪರಾರಿಯಾಗುವ ಯತ್ನದಲ್ಲಿದ್ದಾಗ ಆತನನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ, ಆತ ಫೋನ್ ಮಾಡಿ ಮತ್ತಷ್ಟು ಜನರನ್ನು ಕರೆಸಿದ್ದಾನೆ. ಮಾರಕಾಸ್ತ್ರಗಳನ್ನು ತಂದಿದ್ದ ಯುವಕರು ಗೋಪಿನಾಥ ಮೇಲೆ ಹಲ್ಲೆ ನಡೆಸಿದರು.
ತಕ್ಷಣ ಎಸಿಪಿ ನಾರಾಯಣ ಬರಮನಿ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸ್ ಇನ್ ಸ್ಪೆಕ್ಟರ್ ವಿಜಯ ಮುರಗುಂಡಿ ನೇತೃತ್ವದ ತಂಡ ಒಬ್ಬನನ್ನು ಬಂಧಿಸಿದ್ದಾರೆ.
ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಈ ಸ್ಥಳದಲ್ಲಿ ಪದೇ ಪದೆ ಇಂತಹ ಘಟನೆಗಳು ನಡೆಯುತ್ತಿವೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಒತ್ತಾಯಿಸಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ