ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಮ್ಯೂಚ್ಯುವಲ್ ಫಂಡ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸಾಕ್ಷರತೆಯ ಪ್ರಮಾಣ ಹೆಚ್ಚಾಗಿದ್ದರೂ ಜನರಲ್ಲಿ ಆರ್ಥಿಕ ಸಾಕ್ಷರತೆಯ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯುತ್ತಿಲ್ಲ ಎಂದು ಕೊಟಕ್ ಮ್ಯೂಚ್ಯುವಲ್ ಫಂಡ್ ವ್ಯವಸ್ಥಾಪಕ ನಿರ್ದೇಶಕ ನೀಲೇಶ ಶಹಾ ಅಭಿಪ್ರಾಯಪಟ್ಟಿದ್ದಾರೆ.
ಬೆಳಗಾವಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ತಾವು ದುಡಿದ ಹಣವನ್ನು ಎಲ್ಲಿ ತೊಡಗಿಸಬೇಕು, ಎಲ್ಲಿ ತಮಗೆ ರಿಸ್ಕ್ ರಹಿತ ಲಾಭ ದೊರೆಯಲಿದೆ ಎನ್ನುವ ಜ್ಞಾನ ಕಡಿಮೆ. ಹಾಗಾಗಿ ಕೊಟಕ್ ಮ್ಯೂಚ್ಯುವಲ್ ಫಂಡ್ ಎಲ್ಲ ಕಡೆ ವಿಚಾರಸಂಕಿರಣಗಳ ಮೂಲಕ ಆರ್ಥಿಕ ಸಾಕ್ಷರತೆ ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದರು.
ಡಿಮೊನಿಟೈಸೇಶನ್ ಮತ್ತು ಜಿಎಸ್ ಟಿ ಜಾರಿ ನಂತರ ಉಳಿತಾಯ ಮನೋಭಾವ ಕ್ಷೀಣಿಸುತ್ತಿದೆ ಎನ್ನುವ ವದಂತಿಯನ್ನು ತಳ್ಳಿ ಹಾಕಿದ ಅವರು, ಮೊದಲಿಗಿಂತ ಈಗ ಎರಡು ಪಟ್ಟು ವ್ಯವಹಾರ ವೃದ್ದಿಸಿದೆ. ಅಲ್ಪಾವಧಿಯಲ್ಲಿ ಬೆಳವಣಿಗೆ ತಗ್ಗಿದಂತೆ ಕಂಡರೂ ಈಗ ಸಾಕಷ್ಟು ಸುಧಾರಣೆಯಾಗುತ್ತಿದೆ. ಬರುವ ಸಾಲಿನಲ್ಲಿ ಇನ್ನಷ್ಟು ಬೆಳವಣಿಗೆಯಾಗುತ್ತದೆ ಎಂದು ಹೇಳಿದರು.
ಕೊಟಕ್ ಮ್ಯೂಚ್ಯುವಲ್ ಫಂಡ್ ದೇಶದಲ್ಲಿ 7ನೇ ಮತ್ತು ಕರ್ನಾಟಕದಲ್ಲಿ 6ನೇ ಸ್ಥಾನದಲ್ಲಿದೆ. ತನ್ನ ವೈವಿದ್ಯಮಯ ಮತ್ತು ವಿಶ್ವಾಸಾರ್ಹ ಯೋಜನೆಗಳಿಂದಾಗಿ ಜನರ ವಿಶ್ವಾಸ ಗಳಿಸುತ್ತಿದೆ. ಎಸ್ಐಪಿ ಬಹಳ ವೇಗವಾಗಿ ಜನರನ್ನು ಆಕರ್ಷಿಸುತ್ತಿದ್ದು, ಕೊಟಕ್ 11 ಲಕ್ಷ ಎಸ್ಐಪಿ ಖಾತೆಗಳನ್ನು ಹೊಂದಿದೆ ಎಂದರು.
ಕೊಟಕ್ ಮ್ಯೂಚ್ಯುವಲ್ ಫಂಡ್ ನ ರೀಜನಲ್ ಹೆಡ್ ಬೆಳ್ಳಿಯಪ್ಪ ಟಿಯು, ಬೆಳಗಾವಿಯ ಪ್ರತಿನಿಧಿಗಳಾದ ದತ್ತಾ ಕಣಬರ್ಗಿ ಹಾಗೂ ಅನಿತಾ ಕಣಬರ್ಗಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ