ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಕೆಲವರು ಸ್ಮಾರ್ಟ್ ಕಾರ್ಡ್ ಮಾದರಿಯ ಪಡಿತರ ಚೀಟಿಗಳನ್ನು ವಿತರಿಸುವುದಾಗಿ ಪಡಿತರ ಚೀಟಿದಾರರಿಂದ ಹಾಗೂ ಸ್ಥಳೀಯ ಮುದ್ರಣಾಲಯದವರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ತಿಳಿದು ಬಂದಿದೆ. ಆದರೆ ಯಾವುದೇ ರೀತಿಯ ಸ್ಮಾರ್ಟ್ ಕಾರ್ಡ್‌ಗಳನ್ನು ಇಲಾಖಾ ವತಿಯಿಂದ ನೀಡುತ್ತಿಲ್ಲವೆಂದು ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಏಕ ರಾಷ್ಟ್ರ ಏಕ ಪಡಿತರ ಚೀಟಿ ಯೋಜನೆಯಡಿ ಪಡಿತರ ಚೀಟಿದಾರರಿಗೆ ಹೊಸದಾಗಿ ಸ್ಮಾರ್ಟ್ ಕಾರ್ಡ್ ಮಾದರಿಯ ಪಡಿತರ ಚೀಟಿಗಳನ್ನು ವಿತರಿಸಲಾಗುವುದೆಂದು ಹಾಗೂ ಸ್ಮಾರ್ಟ್ ಕಾರ್ಡ್ ಮಾದರಿಯ ಪಡಿತರ ಚೀಟಿಗಳನ್ನು ಮುದ್ರಿಸಲು ಕೇಂದ್ರ ಸರ್ಕಾರದೊಂದಿಗೆ ಖಾಸಗಿ ಕಂಪನಿಯೊಂದು ಒಪ್ಪಂದ ಮಾಡಿಕೊಂಡಿರುವುದಾಗಿ ನಂಬಿಸಿ ಖಾಸಗಿ ಮುದ್ರಣ ಕಂಪನಿಗಳಿಗೆ ಹಾಗೂ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.
ಪ್ರಸ್ತುತ ಇಲಾಖೆಯಿಂದ ಯಾವುದೇ ಸ್ಮಾರ್ಟ್ ಕಾರ್ಡ್ ಮಾದರಿಯ ಪಡಿತರ ಚೀಟಿಗಳನ್ನು ವಿತರಿಸುವುದಿಲ್ಲ. ಈಗಾಗಲೇ ಆನ್‌ಲೈನ್ ಮೂಲಕ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಅರ್ಜಿದಾರರು ಅರ್ಜಿ ಸಲ್ಲಿಸಿದ ಕೂಡಲೇ ಸದರ ಅರ್ಜಿಯು ಸಂಬಂಧಪಟ್ಟ ಆಹಾರ ನಿರೀಕ್ಷಕರ ಲಾಗಿನ್‌ಗೆ ಹೋಗುತ್ತದೆ.
ಸಂಬಂಧಪಟ್ಟ ಆಹಾರ ನಿರೀಕ್ಷಕರು ಪರಿಶೀಲಿಸಿ ಅನುಮೋದಿಸಿದ ನಂತರ ಪಡಿತರ ಚೀಟಿಯು ನೇರವಾಗಿ ಪಡಿತರ ಚೀಟಿ ಮುದ್ರಣಕ್ಕೆ ಇಲಾಖೆಯಿಂದ ಟೆಂಡರ್ ಮೂಲಕ ಆಯ್ಕೆಯಾಗಿರುವ ಮೆ.ಮಣಿಪಾಲ್ ಪ್ರೆಸ್ ಸಂಸ್ಥೆಯ ಮೂಲಕ ಮುದ್ರಣಗೊಂಡು, ರಿಜಿಸ್ಟ್ರಾರ್ ಪೋಸ್ಟ್ ಮೂಲಕ ನೇರವಾಗಿ ಅರ್ಜಿದಾರರ ವಿಳಾಸಕ್ಕೆ ತಲುಪಿಸುವ ವ್ಯವಸ್ಥೆ ಇರುತ್ತದೆ.
ಕೆಲವರು ಸ್ಮಾರ್ಟ್ ಕಾರ್ಡ್ ಮಾದರಿಯ ಪಡಿತರ ಚೀಟಿಗಳನ್ನು ವಿತರಿಸುವುದಾಗಿ ಪಡಿತರ ಚೀಟಿದಾರರಿಂದ ಹಾಗೂ ಸ್ಥಳೀಯ ಮುದ್ರಣಾಲಯದವರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ತಿಳಿದು ಬಂದಿದೆ ಯಾವುದೇ ರೀತಿಯ ಸ್ಮಾರ್ಟ್ ಕಾರ್ಡ್‌ಗಳನ್ನು ಇಲಾಖಾ ವತಿಯಿಂದ ನೀಡುತ್ತಿಲ್ಲವೆಂದು ಹಾಗೂ ಈ ರೀತಿಯ ಊಹಾಪೋಹಗಳಿಗೆ ಒಳಗಾಗದಂತೆ ಮತ್ತು ಮೋಸ ಹೋಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ