ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಎಲ್ಲ 7 ಸ್ಥಾನಗಳನ್ನೂ ಬಿಜೆಪಿ ತನ್ನ ಮಡಿಲಿಗೆ ಹಾಕಿಕೊಳ್ಳಲಿದೆ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದ್ದಾರೆ.
ಪ್ರಗತಿವಾಹಿನಿಯೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಚಿಕ್ಕೋಡಿ ಕ್ಷೇತ್ರ ಮಾತ್ರ ಕೈ ತಪ್ಪಿತ್ತು. ಆದರೆ ಈ ಬಾರಿ ಅದನ್ನೂ ನಾವು ಗೆಲ್ಲುತ್ತೇವೆ. ಕಳೆದ 5 ವರ್ಷ ನರೇಂದ್ರ ಮೋದಿ ಸರಕಾರದ ಜನಸ್ನೇಹಿ, ರಾಷ್ಟ್ರೀಯ ಹಿತಾಸಕ್ತಿಯ ಆಡಳಿತದ ಜೊತೆಗೆ, ಮೊನ್ನೆ ಮಂಡಿಸಿದ ಕೇಂದ್ರದ ಬಜೆಟ್ ಕೂಡ ಬಿಜೆಪಿ ಗೆಲುವಿಗೆ ನೆರವು ನೀಡಲಿದೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ನಮಗೆ ಬರಲಿದೆ ಎಂದರು.
ಚಿಕ್ಕೋಡಿ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟರೆ ನಿಲ್ಲುವುದಾಗಿ ನಾನು ಹೇಳಿದ್ದೇನೆ. ರಮೇಶ ಕತ್ತಿ, ಅಣ್ಣಾಸಾಹೇಬ ಜೊಲ್ಲೆ ಸಹ ಕೇಳಿದ್ದಾರೆ. ನಮ್ಮ ನಮ್ಮೊಳಗೆ ಭಿನ್ನಾಭಿಪ್ರಾಯವಿಲ್ಲ. ಯಾರಿಗೆ ಕೊಟ್ಟರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಖಂಡಿತ ಗೆಲುವು ಸಾಧಿಸುತ್ತೇವೆ ಎಂದು ಕೋರೆ ತಿಳಿಸಿದರು.
ಬೆಳಗಾವಿಗೆ ಅಂಗಡಿಯೇ ಅಭ್ಯರ್ಥಿ
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸುರೇಶ ಅಂಗಡಿ ಅವರಿಗೇ ಟಿಕೆಟ್ ಸಿಗುತ್ತದೆ. ಬೇರೆ ಅಭ್ಯರ್ಥಿ ನಿಲ್ಲಿಸಲಾಗುತ್ತದೆ ಎನ್ನುವುದೆಲ್ಲ ಊಹಾಪೋಹ. ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ. ಅಂಗಡಿ ಅವರು ಅನೇಕ ಅಭಿವೃದ್ಧಿ ಕೆಲಸಗಳನ್ನು ತಂದಿದ್ದಾರೆ. ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಪ್ರಭಾಕರ ಕೋರೆ ತಿಳಿಸಿದರು.
ಈ ಬಾರಿ ಕೇಂದ್ರದ ಬಜೆಟ್ ವಿರೋಧ ಪಕ್ಷದವರ ಬಾಯಿ ಬಂದ್ ಮಾಡಿದೆ. ಇಂತಹ ಬಜೆಟ್ ಹಿಂದೆಂದೂ ಬಂದಿರಲಿಲ್ಲ. ರೈತರಿಗೆ 6 ಸಾವಿರ ರೂ. ನೀಡುವ ಯೋಜನೆ 2018ರ ಸಾಲಿನಿಂದಲೇ ಜಾರಿಗೆ ಬರಲಿದ್ದು, ಶೀಘ್ರದಲ್ಲೇ ರೈತರ ಅಕೌಂಟ್ ಗೆ ಹಣ ಜಮಾಗೊಳ್ಳಲಿದೆ. ನಮಗೆ ರಾಜಕೀಯ ಆಕಾಂಕ್ಷೆ ಇದ್ದರೂ ರಾಷ್ಟ್ರದ ಅಭಿವೃದ್ಧಿ ಹಿನ್ನೆಲೆಯಲ್ಲಿಯೇ ಬಜೆಟ್ ಮಂಡಿಸಲಾಗಿದೆ ಎಂದು ಕೋರೆ ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ