Latest

ಕನ್ನಡ ನಾಡಿಗೆ ಜೈನರ ಕೊಡುಗೆ ಅತ್ಯಂತ ಉಲ್ಲೇಖನೀಯ ಹಾಗೂ ಅನುಪಮ- ಎಂ.ವಿ. ಭಟ್

ಬೆಳಗಾವಿಯಲ್ಲಿ ದಕ್ಷಿಣ ಕನ್ನಡ ದಿಗಂಬರ ಜೈನ ಮೈತ್ರಿಕೂಟದ ೯ ನೇ ವಾರ್ಷಿಕೋತ್ಸವದಲ್ಲಿ ಪಂಚಮಿ ಮಾರೂರು ಅವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

 ಕನ್ನಡ ನಾಡಿಗೆ ಜೈನರ ಕೊಡುಗೆ ಅತ್ಯಂತ ಉಲ್ಲೇಖನೀಯ ಹಾಗೂ ಅನುಪಮವಾಗಿವೆ ಎಂದು ಬೆಳಗಾವಿಯ ಎಸ್‌ಜಿವಿಯ ಮಹೇಶ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ವಿ. ಭಟ್ ಬಣ್ಣಿಸಿದರು.
ನಗರದ ವಡಗಾವಿ ಯಳ್ಳೂರು ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ಮಂಗಳ ಕಾರ್ಯಾಲಯದಲ್ಲಿ ಭಾನುವಾರ ನಡೆದ ದಕ್ಷಿಣ ಕನ್ನಡ ದಿಗಂಬರ ಜೈನ ಮೈತ್ರಿಕೂಟದ ೯ ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. 

ಜೈನರು ಕನ್ನಡನಾಡಿನ ಸಾಹಿತ್ಯ, ಶಿಲ್ಪಕಲೆ, ಸಾಂಸ್ಕೃತಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಗಣನೀಯವಾದ ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯಲೋಕದ ಆರಂಭದಲ್ಲಿಯೇ ಪಂಪ, ರನ್ನರಂಥ ದಿಗ್ಗಜರು ಗುರುತಿಸಲ್ಪಟ್ಟಿದ್ದಾರೆ. ಇಂದಿನ ಯುವ ಪೀಳಿಗೆಗೆ ಜೈನ ಧರ್ಮದ ತತ್ವಗಳು ಅತ್ಯಂತ ಮಾರ್ಗದರ್ಶಕವಾಗಿದ್ದು, ಅವರ ವಿಚಾರಗಳು ಜೀವನಕ್ಕೆ ಪೂರಕವಾಗಿವೆ. ಜೈನ ಧರ್ಮ ಸಕಲ ಜೀವರಾಶಿಗಳನ್ನು ಪ್ರೀತಿಸುವ ಶ್ರೇಷ್ಠ ಧರ್ಮವಾಗಿ ಗುರುತಿಸಿಕೊಂಡಿದ್ದು, ಮನುಕುಲದ ಉಳಿವಿಗೆ ಅವರ ತತ್ವಗಳು ಆದರ್ಶಪ್ರಾಯವಾಗಿವೆ ಎಂದರು.
ದಕ್ಷಿಣ ಕನ್ನಡ ಜೈನರು ಎಲ್ಲಾ ರಂಗಗಳಲ್ಲಿಯೂ ಸಾಧನೆಗೈದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದ್ದು, ಅವುಗಳಲ್ಲಿ ಜೈನರಿಗೆ ಸೇರಿದ ಕ್ಷೇತ್ರಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಜನರನ್ನು ಆಕರ್ಷಿಸುತ್ತಿವೆ ಎಂದು ಹೇಳಿದರು.
ಮೈತ್ರಿಕೂಟದ ಸನ್ಮಾನ ಸ್ವೀಕರಿಸಿ ಮಾತನಾಡಿದ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಶಿವಾಜಿ ಕಾಗಣಿಕರ, ಪರಿಸರ ಉಳಿಸಿಕೊಳ್ಳುವಲ್ಲಿ ಯುವಕರು ಹೆಚ್ಚಿನ ಗಮನಹರಿಸಬೇಕು. ಪಾಶ್ಚಾತ್ಯ ಸಂಸ್ಕೃತಿಯನ್ನು ಸಾಧ್ಯವಾದಷ್ಟು ದೂರವಿಡಬೇಕು. ನಮ್ಮ ಮಾತೃಭಾಷೆ ಸೇರಿದಂತೆ ನೆರೆ ಹೊರೆಯ ಭಾಷೆಗಳನ್ನು ಪ್ರೀತಿಸಿ ಅವುಗಳ ಬಗ್ಗೆ ಅಭಿಮಾನ ಹೊಂದಬೇಕು. ಸೌಲಭ್ಯ ವಂಚಿತ ಗ್ರಾಮೀಣ ಪ್ರದೇಶದ ಏಳಿಗೆಗೆ ದುಡಿಯುವ ಜತೆಗೆ ಅಲ್ಲಿರುವ ಅನಕ್ಷರಸ್ಥರಿಗೆ ಅಕ್ಷರ ಜ್ಞಾನ ನೀಡುವ ಕೆಲಸ ಇಂದಿನ ಅಗತ್ಯತೆಯಾಗಿದೆ ಎಂದರು.
ಮೈತ್ರಿಕೂಟ ನೀಡಿದ ಯುವ ಮಿನುಗುತಾರೆ ಪ್ರಶಸ್ತಿ ಪಡೆದ ಸಂಗೀತ, ನೃತ್ಯ, ಯಕ್ಷಗಾನ ಪ್ರವೀಣೆ, ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಮೂಡಬಿದಿರೆಯ ಪಂಚಮಿ ಮಾರೂರು ಮಾತನಾಡಿ, ರಾಷ್ಟ್ರ, ರಾಜ್ಯ ಪ್ರಶಸ್ತಿ ಪಡೆಯಲು ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ. ತಂದೆ-ತಾಯಿ, ಶಿಕ್ಷಕರ ಪ್ರೋತ್ಸಾಹ, ಮಾರ್ಗದರ್ಶನದಿಂದ ಸಾಧನೆ ಸಾಧ್ಯವಾಗಿದೆ. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಕ್ಷಣವಷ್ಟೇ ಸಾಲದು. ಪಠ್ಯೇತರ ಚಟುವಟಿಕೆಯೂ ಅಷ್ಟೇ ಅಗತ್ಯವಾಗಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಶಿಕ್ಷಣಕ್ಕೆ ಅದು ಮಾರಕವಾಗಬಹುದು ಎನ್ನುವುದು ತಪ್ಪು ಕಲ್ಪನೆ. ವಿದ್ಯಾರ್ಥಿಗಳು ವಿದ್ಯಾರ್ಜನೆಯ ಸಂದರ್ಭದಲ್ಲಿ ಬೇರೆ ಬೇರೆ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ದೊರೆಯುವ ಸಣ್ಣ ಸಣ್ಣ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಸಾಧನೆಯತ್ತ ಮುನ್ನುಗ್ಗಬೇಕು ಎಂದರು.
ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ ಹಿರಿಯ ಸದಸ್ಯ ಚಂದ್ರಶೇಖರ ಭಂಡಾರಿ ದಂಪತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಮೈತ್ರಿಕೂಟದ ಅಧ್ಯಕ್ಷ ಮಹಾವೀರ ಪೂವಣಿ ಅಧ್ಯಕ್ಷತೆ ವಹಿಸಿದ್ದರು. ಪಂಚಮಿ ಮಾರೂರು ಅವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿವಿಧ ಸ್ಫರ್ಧೆಗಳಲ್ಲಿ ವಿಜೇತರದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಜಿನವಾಣಿ ಉಪಾಧ್ಯೆ, ರತ್ನಾ ಅಜ್ರಿ, ವಿನೋದಾ ಬೋಗಾರ ಪ್ರಾರ್ಥಿಸಿದರು. ಮೈತ್ರಿಕೂಟದ ಸ್ಥಾಪಕ ಅಧ್ಯಕ್ಷ ಬಿ.ಗುಣಪಾಲ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜಿತಕುಮಾರ ಸ್ವಾಗತಿಸಿದರು. ನಿತ್ಯಾ ಜೈನ್ ವಾರ್ಷಿಕ ವರದಿ ವಾಚಿಸಿದರು. ಮುನಿರಾಜ ಜೈನ್ ವಂದಿಸಿದರು.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button