ಪ್ರಗತಿವಾಹಿನಿ ಸುದ್ದಿ, ಭುವನೇಶ್ವರ್ (ಒಡಿಶಾ):
ನಿಯಮಾವಳಿ ಮೀರಿ ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ಮತ್ತು ಬೆಂಗಾವಲು ಪಡೆ ವಾಹನವನ್ನು ತಪಾಸಣೆ ಮಾಡಿದ ಹಿನ್ನೆಲೆಯಲ್ಲಿ ಒಡಿಶಾದಲ್ಲಿ ಚುನಾವಣೆ ವೀಕ್ಷಕರಾಗಿದ್ದ ಕರ್ನಾಟಕದ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಯ್ಸಿನ್ ಅವರನ್ನು ಅಮಾನತುಗೊಳಿಸಲಾಗಿದೆ.
1996ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದ ಮೊಯ್ಸಿನ್ ಒಡಿಶಾದ ಸಂಬಲ್ ಪುರ್ ಲೋಕಸಭಾ ಕ್ಷೇತ್ರದ ಚುನಾವಣೆ ವೀಕ್ಷಕರಾಗಿದ್ದರು. ಸಂಬಲ್ ಪುರ್ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಚುನಾವಣಾ ಭಾಷಣ ಮಾಡಿದ್ದರು. ಈ ವೇಳೆ ಪ್ರಧಾನಿ ವಾಹನಗಳನ್ನು ಮೊಹ್ಮದ್ ಮೊಹ್ಸಿನ್ ತಪಾಸಣೆ ನಡೆಸಿದ್ದರು.
ಅವರು ಚುನಾವಣೆ ಆಯೋಗದ ಮಾರ್ಗದರ್ಶಿ ಸೂತ್ರಗಳನ್ನು ಮೀರಿರುವುದು ಸ್ಪಷ್ಟವಾಗಿದೆ. ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್ ಪಿಜಿ) ಭದ್ರತೆ ಇರುವಂಥ ವಾಹನದ ಬಗ್ಗೆ ಇರುವ ನಿಯಮ ಮೀರಲಾಗಿದೆ. ಈ ಬಗ್ಗೆ ಸಂಬಲ್ ಪುರ್ ಜಿಲ್ಲಾಧಿಕಾರಿ, ಡಿಐಜಿ ಕೂಡ ಲಿಖಿತ ವರದಿಯನ್ನು ನೀಡಿದ್ದಾರೆ. ಲಭ್ಯ ಮಾಹಿತಿಯನ್ನು ಪರಿಗಣಿಸಿ, ಮುಂದಿನ ಆದೇಶದ ತನಕ ಮೊಹ್ಸಿನ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗದ ಆದೇಶದಲ್ಲಿ ತಿಳಿಸಲಾಗಿದೆ.
ಈ ಮಧ್ಯೆ, ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಎಸ್ ಪಿಜಿ ಭದ್ರತೆಗೆ ಯಾವುದೇ ಅಧಿಕಾರವಿರುವುದಿಲ್ಲ. ಎಲ್ಲರೂ ಚುನಾವಣೆ ನೀತಿಸಂಹಿತೆ ಅಡಿಯಲ್ಲಿ ಬರುತ್ತಾರೆ ಎನ್ನುವ ವಾದವೂ ಕೇಳಿ ಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ