Latest

ಕಾನೂನು ವಿದ್ಯಾರ್ಥಿಗಳು ಸಮಾಜಾಭಿವೃದ್ಧಿಯಲ್ಲಿಯೂ ತೊಡಗಬೇಕು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕಾನೂನು ವಿದ್ಯಾರ್ಥಿಗಳು ಕೇವಲ ವೃತ್ತಿಪರ ವಿಚಾರದಿಂದ ಮಾತ್ರವಲ್ಲದೇ ಸಮಾಜಾಭಿವೃದ್ಧಿಯಲ್ಲಿಯೂ ತೊಡಗಬೇಕು ಎಂದು ಚಿಕ್ಕೋಡಿಯ ಭಾರತೀಯ ಜೀವ ವಿಮಾ ಕಂಪನಿಯ ಅಭಿವೃದ್ಧಿ ಅಧಿಕಾರಿ ಆನಂದ ಅರವಾರೆ ಕರೆ ನೀಡಿದರು.

ಬೆಳಗಾವಿಯ ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ವಾರ್ಷಿಕ ದಿನಾಚರಣೆಯ ಮುಖ್ಯ ಅಥಿತಿಗಳಾಗಿ  ಆಗಮಿಸಿದ್ದ ಅವರು, ಕಾನೂನು ವಿದ್ಯಾರ್ಥಿಗಳು ತಮ್ಮ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ  ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಅದರ ಜೊತೆಗೆ ತಮ್ಮ ಕುಟುಂಬ ಮತ್ತು ಸಮಾಜಾಭಿವೃದ್ದಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಜಾಗತೀಕರಣದ ಹಿನ್ನೆಲೆಯಲ್ಲಿ ಕಾನೂನು ಶಿಕ್ಷಣಕ್ಕೆ ಇಂದಿನ ದಿನಗಳಲ್ಲಿ ಅತ್ಯಂತ ಪ್ರಾಮುಖ್ಯತೆ ಲಭಿಸಿದ್ದು, ಅಂತಹ ಅವಕಾಶಗಳನ್ನು ಸದುಪಯೊಗಪಡಿಸಿಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ, ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಸ್ಥಾನಿಕ ಮಂಡಳಿಯ ಅಧ್ಯಕ್ಷ ಆರ್.ಬಿ. ಬೆಲ್ಲದ ಅವರು, ವಕೀಲಿ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು, ಈ ವೃತ್ತಿಯಲ್ಲಿ ತೊಡಗಿಕೊಳ್ಳುವಾಗ ತಮ್ಮಲ್ಲಿ ಬರುವ ಕಕ್ಷಿದಾರರ ವಿಶ್ವಾಸ ಗಳಿಸಬೇಕೆಂದು ಕಿವಿಮಾತನ್ನು ಹೇಳಿದರು.

ಈ ಸಂದರ್ಭದಲ್ಲಿ ಪಿ.ಹೆಚ್.ಡಿ ಪದವಿ ಪಡೆದ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ವಿಜಯ ವ್ಹಿ.ಮುರದಂಡೆ ಅವರನ್ನು ಸನ್ಮಾನಿಸಲಾಯಿತು. ಮಹಾದ್ಯಾಲಯದಲ್ಲಿ ಜರುಗಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ. ಜಯಸಿಂಹ ಅವರು ಮುಖ್ಯ ಅಥಿತಿಗಳನ್ನು  ಪರಿಚಯಿಸಿ, ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಉಮಾ ಹಿರೇಮಠ  ವಾರ್ಷಿಕ ವರದಿ ಪ್ರಸ್ತುತಪಡಿಸಿದರು. ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಪ್ರತಿನಿಧಿ ಸರಸ್ವತಿ ಮೆಳಗೆ ವಂದಿಸಿದರು.  ಅಭಿಶೇಕ ಹಪ್ಪಳಿ ಕಾರ್ಯಕ್ರಮವನ್ನು ನಿರೂಪಿಸಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button