Latest

ಕುಟುಂಬದ ಖಜಾನೆ ತುಂಬಿಸಿಕೊಳ್ಳುತ್ತಿರುವ ನಾಯಕರು -ಮೋದಿ ಟೀಕೆ

ಪ್ರಗತಿವಾಹಿನಿ ಸುದ್ದಿ, ಚಿತ್ರದುರ್ಗ

ಕಾಂಗ್ರೆಸ್ ಪಕ್ಷ ಎಷ್ಟೋ ದಶಕಗಳ ಕಾಲ ಈ ದೇಶಕ್ಕೆ, ಸೇನೆಗೆ ವಿದೇಶಿ ನೀತಿಗೆ ಎಲ್ಲದಕ್ಕೂ ಅನ್ಯಾಯ ಮಾಡುತ್ತ ಬಂದಿದೆ. ಈ ಅನ್ಯಾಯ ಮಾಡಿದವರಿಗೆ ಶಿಕ್ಷೆ ಬೇಕೋ ಬೇಡವೋ? ಬೇಕೆಂದಾದರೆ ಕಮಲದ ಚಿಹ್ನೆಗೆ ಮತ ನೀಡಿ ನಿಮ್ಮ ವಿಶ್ವಾಸವನ್ನು ನರೇಂದ್ರ ಮೋದಿಗೆ ನೀಡುವ ಮೂಲಕ, ಸದೃಢ ಸರ್ಕಾರ ನೀಡುವ ಮೂಲಕ ಕಾಂಗ್ರೆಸ್ ಗೆ ಶಿಕ್ಷೆ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸಿ, ಚಿತ್ರದುರ್ಗದ ಓಬವ್ವ ಕ್ರೀಡಾಂಗಣದಲ್ಲಿ ಬೃಹತ್ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಮೊದಲ ಬಾರಿಗೆ ಮತಚಲಾಯಿಸುವವರಿಗೆ ನನ್ನ ಮನವಿ. ನಿಮ್ಮ ಈ ಮತ ಸದೃಢ ದೇಶಕ್ಕಾಗಿ, ದೇಶಕ್ಕೆ ಪ್ರಾಣತ್ಯಾಗ ಮಾಡುವ ಯೋಧರಿಗೆ, ದೇಶದ ಬಡವ ಮನೆಪಡೆಯುವುದಕ್ಕಾಗಿ, ಎಲ್ಲರಿಗೂ ಶುದ್ಧ ನೀರು ಸಿಗುವುದಕ್ಕಾಗಿ ನಿಮ್ಮ ಮತ ಮೀಸಲಿಡಿ ಎಂದು ಮನವಿ ಮಾಡಿದರು.

ಜನಾದೇಶವನ್ನು ಧಿಕ್ಕರಿಸಿ ರಚನೆಯಾದ ಕರ್ನಾಟಕದ ಮೈತ್ರಿ ಸರ್ಕಾರ ರಾಜ್ಯದ ಜನೆತೆಗೆ ಮೋಸ ಮಾಡಿದೆ ಎಂದು ಮೋದಿ ಹರಿಹಾಯ್ದರು. ರೈತರ ಸಾಲಮನ್ನಾ ನಾಟಕವಾಡುತ್ತಾ ಕುಟುಂಬದ ಖಜಾನೆ ತುಂಬಿಸಿಕೊಳ್ಳುತ್ತಿರುವ ನಾಯಕರು, ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಿದ ಅನುದಾನವನ್ನು ಕೊಳ್ಳೆ ಹೊಡೆಯುವಲ್ಲಿ ನಿರತರಾಗಿದ್ದಾರೆ ಎಂದರು. 

ರೈತರಿಗಾಗಿ ಈ ಸಮ್ಮಿಶ್ರ ಸರ್ಕಾರ ಏನು ಮಾಡಿದೆ? ನಿಮ್ಮ ಸಾಲಮನ್ನಾ ಮಾಡುವುದಾಗಿ ಹೇಳಿದ್ದರಲ್ಲ, ಮಾಡಿದರಾ? ನಿಮ್ಮ ಖಾತೆಗೆ ಹಣ ಹಾಕಿದರಾ? ಕಾಂಗ್ರೆಸ್-ಜೆಡಿಎಸ್ ಗೆ ಯಾರ ಉದ್ಧಾರವೂ ಬೇಕಾಗಿಲ್ಲ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ನಿಯತ್ತಿನಿಂದ ಕೆಲಸ ಮಾಡಿದ್ದರೆ ರಾಜ್ಯ ಹೀಗಿರುತ್ತಿರಲಿಲ್ಲ ಎಂದು ಮೋದಿ ಹೇಳಿದರು.

ಸದೃಢ ಸರ್ಕಾರವನ್ನು ಆರಿಸದಿದ್ದರೆ ಏನಾಗುತ್ತದೆ ಎಂಬುದನ್ನು ಈಗಾಗಲೇ ನೀವು ನೋಡಿದ್ದೀರಿ. ಕರ್ನಾಟಕ ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆ? ಇಂಥ ರಿಮೋಟ್ ಸರ್ಕಾರ ನಿಮಗೆ ಬೇಕೆ? ಎಂದು ಪ್ರಶ್ನಿಸಿದರು.

ವಿಪಕ್ಷಗಳಿಗೆ ದೇಶದ ಹಿತಕ್ಕಿಂತ ಸ್ವಾರ್ಥ ಮುಖ್ಯ, ತುಷ್ಟೀಕರಣವೇ ಅವರ ಧ್ಯೇಯ. ಆದರೆ ನಮ್ಮ ಉದ್ದೇಶ ಸಬ್ ಕೆ ಸಾಥ್ ಸಬ್ ಕೆ ವಿಕಾಸ್ . ನಮ್ಮ ಸಂಕಲ್ಪ ಎಲ್ಲಾ ಬಡವರಿಗೂ ಮನೆ ನೀಡುವುದು, ಎಲ್ಲಾ ಮನೆಗಳಿಗೆ ಎಲ್ ಪಿಜಿ ಸಂಪರ್ಕ ನೀಡುವುದು, ನಮ್ಮ ಸಂಕಲ್ಪ ರೈತರ ಆದಾಯವನ್ನು ದ್ವಿಗುಣಗೊಳಿಸುವುದು. ನಿಮ್ಮೆಲ್ಲರ ಈ ಪರಿ ಪ್ರೀತಿಗಿಂತ ಬೇರೆ ಸೌಭಾಗ್ಯ ಏನಿದೆ. ವೀರಮದಕರಿ ನಾಯಕ, ವೀರ ಮದಕರಿ ನಾಯಕರ ನಾಡಾದ ಈ ಚಿತ್ರದುರ್ಗದ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ನರೇಂದ್ರ ಮೋದಿ ಹೇಳಿದರು. 

 ಕೇವಲ 125 ಕೋಟಿ ಭಾರತೀಯರನ್ನೇ ನನ್ನ ಹೈಕಮಾಂಡ್ ಎಂದುಕೊಳ್ಳುವ ಪ್ರಧಾನಿಯನ್ನು ಆರಿಸಿ.  ಈ ಚುನಾವಣೆಯಲ್ಲಿ ನೀವು ಕೇವಲ ಸಂಸತ್, ಪ್ರಧಾನಿಯನ್ನು ಆರಿಸುತ್ತಿಲ್ಲ. ಒಂದು ಸದೃಢ ಭಾರತಕ್ಕಾಗಿ, ಸದೃಢ ಸರ್ಕಾರವನ್ನು ಆಯ್ಕೆ ಮಾಡುತ್ತೀರಿ.  ಏರ್ ಸ್ಟ್ರೈಕ್ ನಡೆದಾಗಲೂ, ಉಪಗ್ರಹ ಪ್ರತಿರೋಧನ ಅಸ್ತ್ರವನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದಾಗಲೂ ಮೋದಿ ವಿರೋಧಿಗಳು ಟೀಕಿಸಿದರು. ಇವರಿಗೆ ದೇಶದ ಉನ್ನತಿ ಬೇಕಿಲ್ಲ. ಮೋದಿಯನ್ನು ವಿರೋಧಿಸುವುದು ಬೇಕಿದೆ ಎಂದು ಹರಿಹಾಯ್ದರು.  ಹಿಂದಿನ ಸರ್ಕಾರವಿದ್ದಾಗ ಎಷ್ಟೇ ಭಯೋತ್ಪದಾಕ ದಾಳಿ ನಡೆದರೂ, ಪಾಕಿಸ್ತಾನಕ್ಕೆ ಹೆದರಿ ಸರ್ಕಾರ ಸುಮ್ಮನೇ ಕೂರುತ್ತಿತ್ತು. ಆದರೆ ನಾವು ಪಾಕಿಸ್ತಾನದ ಧಮ್ಕಿಗೆ ಹೆದರಲಿಲ್ಲ. ಬಾಲಕೋಟ್ ಗೇ ತೆರಳಿ ನಾವು ದಾಳಿ ನಡೆಸಿದವು ಎಂದು ಪ್ರಧಾನಿ ಹೇಳಿದರು.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button