ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಹದಾಯಿ, ಕಳಸಾ-ಬಂಡೂರಿ ನೀರಿನ ಬಳಕಗೆ ನ್ಯಾಯಾಧೀಕರಣದ ತೀರ್ಪು ಬಂದು ಹಲವು ತಿಂಗಳು ಕಳೆದರೂ ಕೇಂದ್ರ ಸರಕಾರ ಈವರೆಗೆ ಅಧಿಸೂಚನೆ ಹೊರಡಿಸಿಲ್ಲ. ಇದರಿಂದಾಗಿ ರಾಜ್ಯಕ್ಕೆ ಬರಬೇಕಾದ ಮಹಾದಾಯಿ, ಕಳಸಾಬಂಡೂರಿ ನೀರಿನ ಹಕ್ಕು ಲಭಿಸುತ್ತಿಲ್ಲ ಎಂದು ನವಲಗುಂದ ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಎನ್.ಹೆಚ್. ಕೋನರಡ್ಡಿ ಆರೋಪಿಸಿದ್ದಾರೆ.
ಅವರು ಗುರುವಾರ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕೇಂದ್ರ ಸರಕಾರ ಆರಂಭದಿಂದಲೂ ರಾಜ್ಯದೊಂದಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯಕ್ಕೆ ಬರಬೇಕಾದ ಸಾಕಷ್ಟು ಅನುದಾನ ನಿಂತು ಹೋಗಿದೆ. ಮಹದಾಯಿ ವಿಷಯದಲ್ಲಿ ಸಹ ಬಿಜೆಪಿ ಗೋವಾ ಪರ ಒಲುವು ಹೊಂದಿದ್ದರಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಮೊದಲು ಅಧಿಸೂಚನೆ ಹೊರಡಿಸಿ, ನಮ್ಮ ನೀರಿನ ಹಕ್ಕು ನಮಗೆ ನೀಡಲಿ ಎಂದು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ ತಮ್ಮ ಉದ್ಯಮಿ ಸ್ನೇಹಿತರಾದ ಅದಾನಿ ಸಮೂಹ ಸಂಸ್ಥೆಗಳ ಮಾಲೀಕ ಗೌತಮ್ ಅದಾನಿ ಹಾಗೂ ರಿಲಯನ್ಸ್ ಮಾಲೀಕ ಅನಿಲ್ ಅಂಬಾನಿಯ ವಿಮೆ ಕಂಪನಿಗೆ ಪ್ರಧಾನಮಂತ್ರಿ ಫಸಲ್ಬಿಮಾ ಯೋಜನೆ ನೀಡುವ ಮೂಲಕ ರೈತರ ಹೆಸರಿನಲ್ಲಿ ೪.೬೫ ಲಕ್ಷ ಕೋಟಿ ರೂಪಾಯಿ ಅವ್ಯವಹಾರ ಮಾಡಿದ್ದಾರೆ. ದೇಶಾದ್ಯಂತ ೨೦೧೪-೧೫ರಲ್ಲಿ ರೈತರಿಂದ ಸುಮಾರು ೨೦ ಸಾವಿರ ಕೋಟಿ ರೂ. ವಿಮೆಯ ಕಂತು ಹಣ ವಿಮಾ ಕಂಪನಿಗೆ ಜಮಾ ಆಗಿದ್ದು, ಈ ಪೈಕಿ ಕೇವಲ ೫ ಸಾವಿರ ಕೋಟಿ ರೂ. ರೈತರಿಗೆ ಪರಿಹಾರ ರೂಪದಲ್ಲಿ ವಿತರಣೆ ಮಾಡಿದ್ದಾರೆ. ಇನ್ನುಳಿದ ಸುಮಾರು ೧೫ ಸಾವಿರ ಕೋಟಿ ರೂ. ಬೆಳೆ ವಿಮೆ ಮೊಬಲಗು ಆರು ತಿಂಗಳ ಅವಧಿಯಲ್ಲಿ ಖಾಸಗಿ ವಿಮಾ ಕಂಪನಿಗಳಿಗೆ ಲಾಭವಾಗಿದೆ ಎಂದರು.
ಈ ಮೂರು ವರ್ಷಗಳಲ್ಲಿ ರೈತರಿಗೆ ಬೆಳೆ ವಿಮೆ ಪರಿಹಾರ ಕೊಟ್ಟಿರುವಂತಹದ್ದು ಕೇವಲ ೪೫ ಸಾವಿರ ಕೋಟಿ ರೂಪಾಯಿಗಳು. ಒಟ್ಟಾರೆ ೪.೬೫ ಲಕ್ಷ ಕೋಟಿ ರೂ. ಲಾಭಗಳಿಸಲಾಗಿದೆ ಹಾಗೂ ಸರಾಸರಿ ದೇಶದಲ್ಲಿ ೧೩.೬ ದಶಲಕ್ಷ (೧.೩೬ ಕೋಟಿ) ರೈತರು ಬೆಳೆ ವಿಮೆಗೆ ನೋಂದಣಿ ಆಗುತ್ತಿದ್ದಾರೆ. ಮೋದಿಯವರು ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಎಂದು ಹೇಳುತ್ತಾ ಅದಾನಿ ಹಾಗೂ ಅಂಬಾನಿ ಅವರ ವಿಕಾಸ ಮಾಡುತ್ತಿದ್ದಾರೆ ಎಂದು ಕೋನರಡ್ಡಿ ಅವರು ಆರೋಪಿಸಿದರು.
ಈಗಾಗಲೇ ಸಿಎಜಿ ಲೋಕಸಭೆಯಲ್ಲಿ ವರದಿಯನ್ನು ಮಂಡಿಸಿದ್ದು, ಅದರಲ್ಲಿ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಲ್ಲಿ ರೈತರಿಗಿಂತ ಖಾಸಗಿ ವಿಮೆ ಕಂಪನಿಗಳಿಗೆ ಅತೀ ಹೆಚ್ಚು ಲಾಭವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದು ದೇಶದ ಅತಿದೊಡ್ಡ ಹಗರಣವಾಗಿದ್ದು, ಮೂರುವರೆ ವರ್ಷದಲ್ಲಿ ಸರಿಸುಮಾರು ೪.೬೫ ಲಕ್ಷ ಕೋಟಿ ರೂ. ಮೊತ್ತವನ್ನು ರೈತರ ಹೆಸರಿನಲ್ಲಿ ವಿಮಾ ಕಂಪನಿಗಳು ಲೂಟಿ ಮಾಡಿವೆ. ಇದನ್ನು ಸುಪ್ರೀಂ ಕೋರ್ಟ್ ಉನ್ನತ ಸಮಿತಿ ಮುಖಾಂತರ ತನಿಖೆ ನಡೆಸಿ ರೈತರಿಗೆ ಮಾಡಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಕೋನರಡ್ಡಿಆಗ್ರಹಿಸಿದರು.
ಬಿಜೆಪಿಯವರ ಬರ ಅಧ್ಯಯನ ಪರಿಶೀಲನೆ ಯಾವ ಪುರುಷಾರ್ಥಕ್ಕೆ?:
ರಾಜ್ಯ ಬಿಜೆಪಿ ನಾಯಕರು ವಿವಿಧೆಡೆ ತಂಡಗಳನ್ನು ಮಾಡಿಕೊಂಡು ಬರ ಅಧ್ಯಯನ ಹೆಸರಿನಲ್ಲಿ ನಾಟಕ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರವೇ ಅಧಿಕಾರದಲ್ಲಿದ್ದರೂ ರಾಜ್ಯಕ್ಕೆ ನಯಾಪೈಸೆ ಅನುದಾನ ತಂದಿಲ್ಲ. ಇಲ್ಲಿ ರಾಜ್ಯ ಸುತ್ತಿ ಬರ ಅಧ್ಯಯನ ಮಾಡುವ ಬದಲಿಗೆ ಕೇಂದ್ರ ಸರಕಾರದ ಬಳಿಗೆ ನಿಯೋಗ ತೆರಳಿ ರಾಜ್ಯದ ರೈತರ ಪರಿಸ್ಥಿತಿ, ಬರಗಾಲ ಕುರಿತು ಮನವರಿಕೆ ಮಾಡಿ ಅನುದಾನ ತರಲಿ ಎಂದು ಆಗ್ರಹಿಸಿದರು.
ರಾಜ್ಯ ಸರಕಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸುವ ಸಂದರ್ಭದಲ್ಲಿ ದುರುದ್ದೇಶಪೂರ್ವಕವಾಗಿ ರೈತರ ದಿಕ್ಕು ತಪ್ಪಿಸುವ ಉದ್ದೇಶದಿಂದ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದು ಅವರ ಕಪಟತನ ತೋರಿಸುತ್ತದೆ. ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ನಡೆಸುವ ಬದಲು ದೆಹಲಿಗೆ ಹೋಗಿ ಕೇಂದ್ರ ಸರಕಾರದಿಂದ ಅನುದಾನ ತಂದು ರೈತರ ಸಮಸ್ಯೆಗೆ ಪರಿಹಾರ ನೀಡಲಿ. ಕಬ್ಬು ಬೆಳೆಗಾರರ ಬಾಕಿ ಹಣವನ್ನು ಮೊದಲು ಬಿಜೆಪಿ ನಾಯಕರ ಮಾಲೀಕತ್ವದಲ್ಲಿರುವ ಸಕ್ಕರೆ ಕಾರ್ಖಾನೆಗಳು ಪಾವತಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸೂಚನೆ ನೀಡಲಿ ಎಂದು ಕೋನರಡ್ಡಿಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಶಂಕರ ಮಾಡಲಗಿ, ಶಿವನಗೌಡ ಪಾಟೀಲ, ಫೈಜುಲ್ಲಾ ಮಾಡಿವಾಲೆ, ಗಿರೀಶ ಗೋಕಾಕ್, ಪ್ರಕಾಶ ಹುಣಾಳಕರ್, ಸತೀಶ ಒಂಟಗೂಡಿ, ಪಠಾಣ, ಜಿ.ಎಲ್. ಹುರಳಿ, ಸಂತೋಷ ಉಪಾಧ್ಯ, ವೀರಣ್ಣ ರೇವಡಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ