Latest

ಗೆಲುವಿಗೊಂದು ಆತ್ಮಗೌರವವೂ ಇರಲಿ

ಎಂ.ಕೆ.ಹೆಗಡೆ

2019ರ ಲೋಕಸಭಾ ಚುನಾವಣೆಗೆ ಎಲ್ಲಡೆ ಭರ್ಜರಿ ತಯಾರಿ ನಡೆದಿದೆ. ಮೊದಲ ಹಂತದ ಮತದಾನ ಹಿಂಸಾಚಾರದ ಮಧ್ಯೆಯೇ ಶುರುವಾಗಿದೆ. ರಾಷ್ಟ್ರಾದ್ಯಂತ ಎನ್ ಡಿಎ ಮತ್ತು ಯುಪಿಎ ಮಧ್ಯೆ ಆಡಳಿತದ ಚುಕ್ಕಾಣಿ ಹಿಡಿಯಲು ಪೈಪೋಟಿ ನಡೆಯುತ್ತಿದೆ.

ಕಾಂಗ್ರೆಸ್ ಪ್ರಭುದ್ಧರಲ್ಲದ ರಾಜಕಾರಣಿ ರಾಹುಲ ಗಾಂಧಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದೆ. ರಾಹುಲ ಗಾಂಧಿಗಿಂತ ಸಾವಿರಾರು ಪ್ರಭುದ್ಧರು ಕಾಂಗ್ರೆಸ್ ನಲ್ಲಿದ್ದರೂ ಗಾಂಧಿ ಕುಟುಂಬ ಮೀರಿ ನಿಲ್ಲುವ ಸಾಮರ್ಥ್ಯ ಉಳ್ಳವರು ಅಲ್ಲಿಲ್ಲ. ಹಾಗಾಗಿ, ಬಹುತೇಕ ಪಕ್ಷದ ಇತಿಹಾಸ ಮತ್ತು ಅಭ್ಯರ್ಥಿಯ ಸಾಮರ್ಥ್ಯದ ಮೇಲೆಯೇ ಕಾಂಗ್ರೆಸ್ ಚುನಾವಣೆ ಎದುರಿಸುತ್ತಿದೆ.

ಆದರೆ ಬಿಜೆಪಿಯಲ್ಲಿ ಹಾಗಿಲ್ಲ. ಶೇ. 90ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ನರೇಂದ್ರ ಮೋದಿ ಹೆಸರಲ್ಲಿ ಚುನಾವಣೆ ನಡೆಯುತ್ತಿದೆ. ಅಭ್ಯರ್ಥಿ ಯಾರು ಎನ್ನುವುದು ಇಲ್ಲಿ ಗೌಣ. ಕರ್ನಾಟಕದಲ್ಲಂತೂ ಎಲ್ಲ 28 ಕ್ಷೇತ್ರಗಳಲ್ಲಿ ಮೋದಿಯೇ ಅಭ್ಯರ್ಥಿ ಎಂದು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಇದು ಪ್ರಜಾಪ್ರಭತ್ವದ, ಇಲ್ಲಿನ ಮತದಾರರ ದೌರ್ಭಾಗ್ಯ ಎನ್ನದೇ ವಿಧಿಯಿಲ್ಲ. 

ನಿಜವಾದ ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದ ಸಂಸದರು ನಾಯಕನನ್ನು ಆಯ್ಕೆ ಮಾಡಿ, ಪ್ರಧಾನಿಯನ್ನಾಗಿಸುವುದು ಪದ್ಧತಿ. ಮೊದಲೇ ಪ್ರಧಾನಿ ಅಭ್ಯರ್ಥಿ ಘೋಷಿಸುವುದಾಗಲಿ, ನೇರವಾಗಿ ಪ್ರಧಾನಿಗಾಗಿ ಮತ ಕೊಡಿ ಎಂದು ಕೇಳುವುದಾಗಲಿ ಸರಿಯಾದ ಪದ್ಧತಿ ಅಲ್ಲ.

ಬಿಜೆಪಿಯ ಬಹುತೇಕ ಅಭ್ಯರ್ಥಿಗಳು ತಮ್ಮ ಸಾಧನೆಯನ್ನು ಹೇಳಿಕೊಳ್ಳ(ಲಾಗ)ದೆ ನರೇಂದ್ರ ಮೋದಿ ಹೆಸರು ಹೇಳಿ ಪ್ರಚಾರ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಈ ರಾಷ್ಟ್ರಕಂಡ ಉತ್ತಮ ಪ್ರಧಾನಿ ಎನ್ನುವುದನ್ನು, ಅವರ ದೂರದೃಷ್ಟಿಯಿಂದ ರಾಷ್ಟ್ರ ಉತ್ತಮ ಭವಿಷ್ಯ ಕಾಣಬಹುದೆನ್ನುವುದನ್ನು  ಒಪ್ಪಿಕೊಳ್ಳೋಣ . ಕಳೆದ 5 ವರ್ಷದಲ್ಲಿ ಜಿಎಸ್ ಟಿ, ಡಿಮೊನಿಟೈಸೇಶನ್ ಮೊದಲಾದ ನೀತಿಗಳಿಂದ ಜನಸಾಮಾನ್ಯರು, ಉದ್ಯಮಿಗಳು ಸಾಕಷ್ಟು ತೊಂದರೆ ಅನುಭವಿಸಿದರೂ ರಾಷ್ಟ್ರದ ಭವಿಷ್ಯಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡು ಮತ್ತೊಮ್ಮೆ ಅವರ ಮೇಲೆ ವಿಶ್ವಾಸವಿಡಬಹುದು.

ಆದರೆ ಪ್ರಶ್ನೆ ಅದಲ್ಲ, ನಾವು ಆಯ್ಕೆ ಮಾಡುವ ಅಭ್ಯರ್ಥಿಯದ್ದು. ಅವರು ತಮ್ಮ ಸಾಮರ್ಥ್ಯ, ತಮ್ಮ ಸಾಧನೆ ಹೇಳಿಕೊಳ್ಳದೆ ನರೇಂದ್ರ ಮೋದಿ ಹೆಸರಲ್ಲಿ ಮತ ಕೇಳುವುದು ತೀರಾ ನಾಚಿಕೆಗೇಡಿನ ಸಂಗತಿಯೇ. ಮೊದಲ ಬಾರಿ ಆಯ್ಕೆಯಾಗುವವರು ಹೇಳಿಕೊಳ್ಳಲು ಏನೂ ಇಲ್ಲದಿದ್ದರೆ ಪಕ್ಷ, ನಾಯಕನ ಹೆಸರು ಹೇಳಿ ಪ್ರಚಾರ ಮಾಡಿದರೆ ಒಪ್ಪಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಅವರನ್ನು ಅರಿಯುವ ಅವಕಾಶ ಮತದಾರರಿಗೆ ಇರುತ್ತದೆ.

ಆದರೆ 4ನೇ ಬಾರಿ, 6ನೇ ಬಾರಿ ಕಣಕ್ಕಿಳಿದವರಿಗೂ ಹೇಳಿಕೊಳ್ಳಲು ಏನೂ ಇಲ್ಲದಿದ್ದರೆ ಇದು ಮತದಾರರ ಸೋಲು ಎನ್ನದೇ ವಿಧಿಯಿಲ್ಲ. ಮೋದಿ ಹೆಸರಿನಿಂದಲೇ ಮತ ಕೇಳುವುದಾದರೆ, ಮೋದಿ ಹೆಸರಿನಿಂದಲೇ ಆಯ್ಕೆಯಾಗುವುದಾದರೆ ಅವರಲ್ಲಿ ಆತ್ಮ ಗೌರವವೇನು ಉಳಿಯಿತು? 

ಕೆಲಸದ ಮೂಲಕ ತಮ್ಮ ಸಾಮರ್ಥ್ಯ ತೋರಿಸಲು, ಮತ ಕೇಳಲು 2 ಬಾರಿ, 3 ಬಾರಿ, 4 ಬಾರಿ ಸಂಸದರಾದರೂ ಸಾಧ್ಯವಾಗಿಲ್ಲವೆಂದಾದರೆ, ಅವರಿಗೆ ಮತ್ತೆ ಗೆಲ್ಲಲು ನರೇಂದ್ರ ಮೋದಿ ಹೆಸರೇ ಬೇಕೆಂದಾದರೆ ಅಂತಹ ಸಂಸದ ಮತ್ತೆ ಕಣಕ್ಕಿಳಿಯುವುದು ಪ್ರಜಾಪ್ರಭುತ್ವದ ಅಣಕವೇ ಸರಿ. 

ಮೊದಲ ಬಾರಿಗೆ ಸಂಸದರಾದಾಗ ವ್ಯವಸ್ಥೆಯ ಬಗೆಗೆ ತಿಳಿದುಕೊಳ್ಳಲು ಒಂದಿಷ್ಟು ಸಮಯ ಬೇಕಾಗುತ್ತದೆ ಎನ್ನುವುದನ್ನು ಒಪ್ಪಬಹುದು. ಆದರೆ 2-3 ಬಾರಿ ಸಂಸದರಾದವರು ಮೈ ಚಳಿ ಬಿಟ್ಟು ಸಾರ್ವಜನಿಕ ಕೆಲಸ ಮಾಡಬೇಕು. ವಯಕ್ತಿಕ ಉದ್ದಾರ ಮಾಡಿಕೊಳ್ಳುವುದೋ…  ಆಗಿರುವ ಕೆಲಸವೆಲ್ಲವೂ ತಾವೇ ಮಾಡಿದ್ದೆನ್ನುವುದೋ… ಅವರಿಗೆ ಜನರ ಹೃದಯದಲ್ಲಿ ಸ್ಥಾನ ತಂದುಕೊಡುವುದಿಲ್ಲ. ನಾಯಕರ ಹೆಸರು  ಗೆಲುವು ತಂದುಕೊಡಬಹುದು, ಆದರೆ ಅದು ಗೌರವಯುತವಾದ ಗೆಲುವಾಗಿರುವುದಿಲ್ಲ.  ಆ ಗೆಲುವಿನಲ್ಲಿ ಶ್ರೇಷ್ಠತೆ ಇರುವುದಿಲ್ಲ. ಅದು ಸಂಸದ ಸ್ಥಾನದ ಗೌರವವನ್ನು ಉಳಿಸುವುದಿಲ್ಲ. ಗೆದ್ದ ನಂತರವೂ ಆತ್ಮ ವಿಶ್ವಾಸದಿಂದ ಓಡಾಡಲು ಆಗುವುದಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಅಧಿಕಾರಕ್ಕೆ, ತಮ್ಮ ತಮ್ಮ ಸ್ಥಾನಕ್ಕೆ ನ್ಯಾಯ ಒದಗಿಸದಿದ್ದರೆ ಅದು ಪ್ರಜಾಪ್ರಭುತ್ವದ ಸೋಲೆನ್ನದೆ ವಿಧಿಯಿಲ್ಲ. 

(ಪ್ರಗತಿವಾಹಿನಿ ಸುದ್ದಿ, ಲೇಖನಗಳನ್ನು ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button